ಪ್ರಾಕ್ತನಶಾಸ್ತ್ರ

	ಐತಿಹಾಸಿಕ ಅಥವಾ ಪ್ರಾಗೈತಿಹಾಸಿಕ ಜನಾಂಗಗಳ ಸಂಸ್ಕøತಿಗಳಿಗೆ ಸಂಬಂಧಿಸಿದ ಲಭ್ಯ. ಅವಶೇಷಗಳ ವೈಜ್ಞಾನಿಕಾಧ್ಯಯನದ (ಆರ್ಕಿಯಾಲಜಿ) ಪುರಾತತ್ತ್ವಶಾಸ್ತ್ರ ಪರ್ಯಾಯನಾಮ. ಇತಿಹಾಸ ಅಥವಾ ಚರಿತ್ರೆ ಇದಕ್ಕಿಂತ ಭಿನ್ನವಾದದ್ದು. ಇದು ಲಿಖಿತ ದಾಖಲೆಗಳ ವೈಜ್ಞಾನಿಕಾಧ್ಯಯನ. ಎಂದೇ ಪ್ರಾಕ್ತನಶಾಸ್ತ್ರಜ್ಞನ ಅಧ್ಯಯನ ವಿಷಯ ಆಯಾಕಾಲದ ಜನಾಂಗಗಳು ಬಳಸಿದ ವಸ್ತುಗಳು ಮತ್ತು ಕಟ್ಟಿದ ಕಟ್ಟಡಗಳು, ಇವು ಯಥಾಸ್ಥಿತಿಯಲ್ಲಿ ಎಲ್ಲಿಯೂ ದೊರೆಯವು ಎಂಬುದು ಸ್ಟಷ್ಟ. ಹೆಚ್ಚಿನವು ಕಾಲದ ಹೊಡತದಿಂದ ನಷ್ಟವಾಗಿ ಅವಶೇಷಗಳು ಮಾತ್ರ ಗತವೈಭವಕ್ಕೆ ಗುರಿಹಿಡಿದ ತೋರುಗುರುತುಗಳಾಗಿ ಉಳಿದಿರುತ್ತವೆ. ಇವನ್ನೇ ಆಧರಿಸಿ ಆತ ಹಿಂದಿನ ಕಾಲದ ಸಮಗ್ರ ಚಿತ್ರಣವನ್ನು ರೂಪಿಸಬೇಕಾಗುತ್ತದೆ. ಈ ಅವಶೇಷಗಳಾದರೂ ನೆಲದಡಿಯಲ್ಲಿ ಮರೆಯಾಗಿರುವುದೇ ವಾಡಿಕೆ. ಆದ್ದರಿಂದ ಉತ್ಖನನ ಕ್ರಿಯೆ ಪ್ರಾಕ್ತನಶಾಸ್ತ್ರಜ್ಞ ಅನುಸರಿಸುವ ಒಂದು ಮುಖ್ಯ ಮಾರ್ಗ.

	ಇಷ್ಟಾದರೂ ಪ್ರಾಕ್ತನಶಾಸ್ತ್ರದ ಮಿತಿಯೊಳಗೆ ಆದಿಮಾನವನ ಭೌತಿಕ ಜೀವನದ ಸಂಗತಿಗಳನ್ನು ನೇರವಾಗಿ ತಿಳಿಯಲು ಸಾಧ್ಯವೇ ಹೊರತು. ಆಗಿನ ಧಾರ್ಮಿಕ ಆಚಾರ ವ್ಯವಹಾರಗಳು, ನಂಬಿಕೆ, ಸಾಮಾಜಿಕ ಮತೀಯ ಪದ್ದತಿಗಳು ಇವನ್ನು ತಿಳಿಯಲು ಸಾಧ್ಯವಿಲ್ಲ. ಅಂಥ ವಿಷಯಗಳನ್ನು ಸಾಂದರ್ಭಿಕವಾಗಿ ದೊರೆತ ವಸ್ತು ಅವಶೇಷಗಳ ಸಹಾಯದಿಂದ ಊಹಿಸಬೇಕಾಗುತ್ತದೆ. ಕೆಲವೊಮ್ಮೆ ಆಯುಧೋಪಕರಣಗಳನ್ನು ಕುರಿತಂತೆಯೂ ಅನಿಶ್ಚಿತತೆ ಏರ್ಪಡಬಹುದು. ಹಲವಾರು ಆಯುಧೋಪಕರಣಗಳು ಬದಲಾಗುತ್ತಿರುವ ಮಾನವನ ಅವಶ್ಯಕತೆಗೆ ಅನುಸಾರವಾಗಿ ಅನುಪಯುಕ್ತವಾಗಬಹುದು, ಅಥವಾ ಅವುಗಳ ಆಕಾರ, ತಯಾರಿಕೆಯ ವಿಧಾನ ಇವುಗಳಲ್ಲಿ ಮಾರ್ಪಾಡಾಗಬಹುದು. ಇಂದಿನ ಸನ್ನಿವೇಶದಲ್ಲಿ ಅವುಗಳ ನಿಶ್ಚಿತ ಉಪಯೋಗವನ್ನು ತಿಳಿಯುವುದು ಕಷ್ಟ. ಹೀಗಾಗಿ ಪ್ರಾಕ್ತನಶಾಸ್ತ್ರದ ಸಹಾಯದಿಂದ ಆದಿಮಾನವನ ಸಮಗ್ರ ಇತಿಹಾಸ ಲಭ್ಯವಾಗುವುದಿಲ್ಲ. ಅದು ಬಹಳಷ್ಟು ತುಂಡರಿಸಿ ಹೋಗಿರುತ್ತದೆ. ಎರಡನೆಯದಾಗಿ, ಲಿಖಿತ ದಾಖಲೆಗಳ ಆಧಾರದಿಂದ ಇತಿಹಾಸ ನಿರ್ಮಿಸುವಾಗ ವ್ಯಕ್ತಿಗತ ಘಟನೆಗಳನ್ನೂ ಚಟುವಟಿಕೆಗಳನ್ನೂ ಆಶೋತ್ತರಗಳನ್ನೂ ಸಾಧನೆಗಳನ್ನೂ ತಿಳಿಯಬಹುದು. ಅಶೋಕನ ಬೌದ್ಧಮತ ಪ್ರಸಾರ ನೀತಿ ಔರಂಗಜೇಬನ ಮತಾಂಧತೆ ಇವು ಐತಿಹಾಸಿಕ ದಾಖಲೆಗಳಿಂದ ತಿಳಿದುಬರುತ್ತವೆ. ಆದರೆ ಪ್ರಾಕ್ತನ ಆಧಾರಗಳು ಸಾಮೂಹಿಕ ಕಾರ್ಯಗಳ, ಸಾಧನೆಗಳ ಇತಿಹಾಸವನ್ನು ತಿಳಿಸುತ್ತವೆಯಲ್ಲದೆ ವ್ಯಕ್ತಿಗಳನ್ನು ಗುರುತಿಸುವುದಿಲ್ಲ. ಒಂದು ಕಾಲದಲ್ಲಿ ಒಂದು ಪ್ರದೇಶದಲ್ಲಿದ್ದ ಸಂಸ್ಕøತಿಯ ಲಕ್ಷಣಗಳನ್ನೂ ನಾಗರೀಕತೆಯ ಸ್ವರೂಪವನ್ನೂ ತಿಳಿಯಬಹುದು ಅಷ್ಟೆ.	

	ಪ್ರಾಕ್ತನಶಾಸ್ತ್ರಜ್ಞರ ಕೆಲಸ ದ್ವಿಮುಖವಾದ್ದು ಮೊದಲನೆಯದಾಗಿ ಮಾಹಿತಿಗಳ ಸಂಗ್ರಹಣೆ ಮತ್ತು ಎರಡನೆಯದಾಗಿ ಅವುಗಳ ವಿಶ್ಲೇಷಣೆ, ಅರ್ಥೈಸುವಿಕೆ ಮತ್ತು ಇತಿಹಾಸ ರಚನೆಯಲ್ಲಿ ಅವುಗಳ ಪಾತ್ರ ನಿರ್ಧಾರ. ಪ್ರಾಕ್ತನ ವಸ್ತುಗಳು ಸಾಧಾರಣವಾಗಿ ಬಲುಮಟ್ಟಿಗೆ ನಾಶವಾಗಿ, ಉಳಿದವು ಭೂಮಿಯೊಳಗೆ ಹುದುಗಿರುತ್ತವೆ ಅಥವಾ ನೈಸರ್ಗಿಕ ಚಟುವಟಿಕೆಗಳ ಪ್ರಭಾವದಿಂದ ನದೀ ವೇದಿಕೆಗಳಲ್ಲೋ ಸಮುದ್ರತಳದಲ್ಲೋ ಹುದುಗಿರುತ್ತವೆ. ದಿನಂಪ್ರತಿ ಆವಿರ್ಭವಿಸುತ್ತಿರುವ ಹೊಸ ವಿಧಾನಗಳ ನೆರವಿನಿಂದ ಪ್ರಾಕ್ತನಶಾಸ್ತ್ರಜ್ಞರು ಅಂಥ ಅವಶೇಷಗಳಿರಬಹುದಾದ ನೆಲೆಗಳನ್ನು ಶೋಧಿಸಬೇಕು; ಅವಶ್ಯವಾದರೆ ವೈಜ್ಞಾನಿಕ ವಿಧಾನಗಳಿಂದ ಅಂಥ ನೆಲೆಗಳನ್ನು ಉತ್ಖನನ ಮಾಡಿ ಅವಶೇಷಗಳನ್ನು ಯುಕ್ತ ಹಿನ್ನಲೆಯೊಂದಿಗೆ ಸಂಗ್ರಹಿಸಬೇಕು ಹಾಗೆ ಸಂಗ್ರಹಿಸುವಾಗ ವಿವಿಧ ಅವಶೇಷಗಳ ಪರಸ್ಪರ ಸಂಬಂಧ, ಅವುಗಳ ಸ್ತರೀಕರಣ ಇವನ್ನು ಗಮನಿಸಿ, ನೋಂದಾಯಿಸಿಕೊಳ್ಳಬೇಕು. ಸ್ಥಳಾಂತರಗೊಳಿಸಬಹುದಾದ ವಸ್ತು ಅವಶೇಷಗಳನ್ನು ಪ್ರಯೋಗಶಾಲೆಗಳಿಗೋ ವಸ್ತುಸಂಗ್ರಹಾಲಯಕ್ಕೋ ಕೊಂಡೊಯ್ದು ಅವುಗಳ ಅರ್ಥ ವಿಶ್ಲೇಷಣೆಗೆ ಗಮನಕೊಡಬೇಕು. ಸ್ಥಳಾಂತರಗೊಳಿಸಲಾಗದ ಅವಶೇಷಗಳನ್ನು ಕಟ್ಟಡದ ಉಳಿಕೆಗಳು. ಮನೆಗಳ ನೆಲೆಗಟ್ಟುಗಳು, ಭಿತ್ತಿಚಿತ್ರಗಳು ಅವುಗಳಿಗೆ ಸಂಬಂಧಿಸಿದ ಭೌಗೋಳಿಕ ಹಿನ್ನಲೆ ಮುಂತಾದ ಮಾಹಿತಿಗಳನ್ನು ಉಚಿತ ರೀತಿಯಲ್ಲಿ ರೇಖಾ ಚಿತ್ರ. ಛಾಯಾಚಿತ್ರ ಮತ್ತು ಟಪ್ಪಣಿಗಳ ಮೂಲಕ ವಿಶಾದೀಕರಿಸಬೇಕು. ಈ ಎಲ್ಲ ಕಾರ್ಯಗಳು ಮೊದಲನೆಯ ಮಾಹಿತಿ ಸಂಗ್ರಹಣೆಯ, ಹಂತಕ್ಕೆ ಸೇರಿದವು. ಈ ರೀತಿ ಸಂಗ್ರಹಿಸಿದ ಮಾಹಿತಿಗಳ ಸಹಾಯದಿಂದ ತಿಳಿಯಬಹುದಾದ ಇತಿಹಾಸವನ್ನು ರೂಪಿಸುವುದು ಎರಡನೆಯ ಹಂತ ಕಾರ್ಯ. ಈ ಹಂತದಲ್ಲಿ ವಿವಿಧ ವಸ್ತುಗಳ ಅವಶೇಷಗಳ ಉದ್ದೇಶ. ತಯಾರಿಕಾ ತಂತ್ರ. ಅವುಗಳ ನಿರ್ಮಾಣದಲ್ಲಿ ಬಳಸಿದ ಶಿಲಾವಸ್ತುಗಳು ಇವನ್ನು ತಿಳಿದುಕೊಂಡು, ವಿವಿಧ ಅವಶೇಷಗಳ ಉಪಯೋಗಗಳನ್ನು ಊಹಿಸಿಕೊಂಡು, ಅವು ಇತರ ಯಾವ ವಸ್ತುಗಳೊಂದಿಗೆ ದೊರಕಿವೆಯೋ ಅವುಗಳ ಸಂದರ್ಭಾನುಸಾರವಾಗಿ ತಿಳಿದುಕೊಳ್ಳಬಹುದಾದ ಮಾಹಿತಿಗಳನ್ನು ಗುರುತಿಸಿಕೊಳ್ಳುವುದು ಮತ್ತು ಈ ಎಲ್ಲ ಸಂಗತಿಗಳ ಸಹಾಯದಿಂದ ಆಗಿನ ಮಾನವನ ಜೀವನಕ್ರಮ, ವಸತಿ, ಆಹಾರ, ಉಡುಗೆತೊಡುಗೆಗಳ ಪರಿಚಯಗಳಿಸುವುದು ನಡೆಯುತ್ತದೆ.

	ಈ ಕಾರ್ಯಗಳು ಫಲಪ್ರದವಾಗಬೇಕಾದರೆ ಪ್ರಾಕ್ತನಶಾಸ್ತ್ರಜ್ಞರು ಹೆಚ್ಚು ಅನುಭವ ಪಡೆದಿರಬೇಕು. ಆಯಾ ಪ್ರದೇಶದ ಪ್ರಾಚೀನ ಸಂಸ್ಕøತಿ, ಜನಜೀವನ ಪದ್ಧತಿ, ಪರಿಸರದ ಭೌಗೋಳಿಕ ಲಕ್ಷಣಗಳು ಇವನ್ನು ತಿಳಿದಿರಬೇಕು. ಅಲ್ಲಿ ದೊರಕುವ ನೈಸರ್ಗಿಕ ಸಂಪತ್ತಿನ ಮಾಹಿತಿ ಹೊಂದಿರಬೇಕು. ಆ ಪ್ರದೇಶ ಬೇರಾವ ಪ್ರದೇಶಗಳೊಂದಿಗೆ ಸಾಂಸ್ಕøತಿಕ ವ್ಯಾವಹಾರಿಕ ಸಂಪರ್ಕಗಳನ್ನು ಹೊಂದಿತ್ತೆಂಬುದನ್ನು ತಿಳಿದಿರಬೇಕು. ಇವೆಲ್ಲಕ್ಕೂ ಮಿಗಿಲಾಗಿ, ಒಂದು ನೆಲೆಯಲ್ಲಿ ಅಥವಾ ಪ್ರದೇಶದಲ್ಲಿ ಕಂಡುಬರುವ ಹಲವು ಕ್ರಮಾಗತ ಸಂಸ್ಕøತಿಗಳ ಪರಸ್ಪರ ಕಾಲಾನುಕ್ರಮದ ಮಾಹಿತಿಯನ್ನು ಹೊಂದಿರಬೇಕು. ಇದು ಬಹಳ ಮುಖ್ಯವಾದ್ದು. ಇತಿಹಾಸದ ಬೆನ್ನಲುಬು ಕಾಲನಿರ್ಣಯ ಎಂದು ಸಾಮಾನ್ಯವಾಗಿ ಹೇಳುವುದುಂಟು. ಯಾವುದೇ ಅವಶೇಷಗಳ, ಸಂಸ್ಕøತಿಗಳ, ನಾಗರಿಕತೆಗಳ ಕಾಲನಿರ್ಣಯವಾಗದಿದ್ದರೆ ಅವುಗಳ ಉಗಮ, ಬೆಳವಣಿಗೆ ಕಾಲಕ್ರಮದಲ್ಲಿ ಉಂಟಾದ ಅವನತಿ ಇವನ್ನು ನಿರ್ಧರಿಸಲಾಗುವುದಿಲ್ಲ.

	ಕಾಲನಿರ್ಣಯ ವಿಧಾನಗಳು : ಪ್ರಾಕ್ತನಶಾಸ್ತ್ರದಲ್ಲಿ ಕಾಲನಿರ್ಣಯಕ್ಕೆ ಹಲವಾರು ವಿಧಾನಗಳನ್ನು ಬಳಸಲಾಗುತ್ತದೆ. ಅವನ್ನು ಸಾಮಾನ್ಯವಾಗಿ ಸ್ಥೂಲವಾಗಿ ಎರಡು ಗುಂಪುಗಳಾಗಿ ವಿಂಗಡಿಸಬಹುದು: 1 ಸಂಬಂಧಸೂಚಕ ಅಥವಾ ಸಾಪೇಕ್ಷಕಾಲ ನಿರ್ಣಯ 2 ಸ್ವತಂತ್ರ ಅಥವಾ ನಿರಪೇಕ್ಷ ಕಾಲನಿರ್ಣಯ.

	ಪ್ರಾಕ್ತನಶಾಸ್ತ್ರಜ್ಞರು ಮೊದಲಿನಿಂದ ಬಳಸುತ್ತಿದ್ದ ಪದರ ವಿಶ್ಲೇಷಣೆ, ತಯಾರಿಕಾ ತಂತ್ರ ಮತ್ತು ಆಕೃತಿ ಹೋಲಿಕೆ ಜೊತೆಯಲ್ಲಿ ಸಿಕ್ಕ ಅವಶೇಷಗಳ ಸಹಾಯದಿಂದ ಕಾಲನಿರ್ಣಯ ಮತ್ತು ಅವಶೇಷಗಳ ಸವೆತದ ಆಧಾರದ ಮೇಲೆ ಅಧ್ಯಯನ-ಇವು ಸಾಪೇಕ್ಷ ಕಾಲನಿರ್ಣಯ ವಿಧಾನಗಳಲ್ಲಿ ಪ್ರಮುಖವಾದವು. ಪದರ ವಿಶ್ಲೇಷಣೆಯಲ್ಲಿ ಮಾನವ ವಸತಿಯ ನೆಲೆಗಳಲ್ಲಿ ದೊರಕುವ ವಸ್ತುಗಳು ಅಸ್ತವ್ಯಸ್ತಗೊಳ್ಳದೆ ಭೂಪದರಗಳಲ್ಲಿ ದೊರಕುವ ಎಲ್ಲ ಅವಶೇಷಗಳೂ ಆ ಭೂಪದರದ ಕಾಲ ಅಥವಾ ಅದಕ್ಕಿಂತಲೂ ಹಿಂದಿನವೆಂದು ತಿಳಿಯಬಹುದು. ಅನಂತರದ ಕಾಲದ ವಸ್ತುಗಳು ತತ್ಪೂರ್ವಕಾಲದ ಪದರಗಳಲ್ಲಿ ಹುದುಗಿಕೊಳ್ಳಲು ಸಾಧ್ಯವಿಲ್ಲ. ವಿವಿಧ ಕಾಲಗಳಲ್ಲಿ ಮಾನವ ತನ್ನ ಆಯುಧೋಪಕರಣಗಳನ್ನು ತಯಾರಿಸಲು ನಿರ್ದಿಷ್ಟ ತಂತ್ರಗಳನ್ನು ಬಳಸುತ್ತಿದ್ದ. ಪುರಾತನ ಶಿಲಾಯುಗದಲ್ಲಿ ಕಲ್ಲುಗಳಿಂದ ಚಕ್ಕೆಗಳನ್ನು ತೆಗೆಯುವುದರ ಮೂಲಕ ಆಯುಧಗಳಿಗೆ ನಿರ್ದಿಷ್ಟ ಆಕೃತಿಯನ್ನು ನೀಡುತ್ತಿದ್ದ. ಆದರೆ ನೂತನ ಶಿಲಾಯುಗದಲ್ಲಿ ಆಯುಧಗಳ ಉಪಯುಕ್ತತೆಯನ್ನು ಹೆಚ್ಚಿಸಲು ಅವುಗಳ ಅಂಚುಗಳನ್ನು ಉಜ್ಜಿ ನಯಗೊಳಿಸುತ್ತಿದ್ದ. ಲೋಹಯುಗದಲ್ಲಿ ವಿವಿಧ ಪ್ರಗತಿಪರ ತಂತ್ರಗಳು ಬಳಕೆಯಲ್ಲಿದ್ದವು. ಆದ್ದರಿಂದ ತಯಾರಿಕಾ ತಂತ್ರಗಳ ಅಧ್ಯಯನ ನಡೆಸಿದರೆ ಯಾವ ತಂತ್ರಗಳು ಹೆಚ್ಚು ಸುಧಾರಿತ ಮತ್ತು ಆ ಕಾರಣದಿಂದ ಅನಂತರ ಕಾಲದವು ಎಂದು ತಿಳಿಯಬಹುದು. ಒಂದು ಪದರದಲ್ಲಿ ದೊರಕುವ ವಿವಿಧ ವಸ್ತುಗಳಲ್ಲಿ ಯಾವುದಾದರೊಂದರ ಕಾಲನಿರ್ಣಯವಾಗಿದ್ದರೆ (ಉದಾಹರಣೆ-ಒಂದು ನಾಣ್ಯ) ಅಥವಾ ಬೇರಾವುದೋ ನೆಲೆಯಲ್ಲಿ ಕಾಲನಿರ್ಣಯವಾಗಿರುವ ಅವಶೇಷ ದೊರಕಿದರೆ ಅದರೊಂದಿಗೆ ದೊರಕುವ ಉಳಿದೆಲ್ಲ ವಸ್ತುಗಳ ಕಾಲವನ್ನು ನಿರ್ಧರಿಸಬಹುದು. ಕೊನೆಯದಾಗಿ ಅವಶೇಷಗಳು ಅವುಗಳ ತಯಾರಿಕೆಯ ಸಮಯದಲ್ಲಿದ್ದಂತೆ ಹೊಸದಾಗಿವೆಯೇ ಅಥವಾ ಉಪಯೋಗದಿಂದಲೋ ಇತರ ವಸ್ತುಗಳೊಂದಿಗೆ ಸಂಭವಿಸಿರಬಹುದಾದ ತಾಕಲಾಟದಿಂದಲೋ ಸವೆದು ಹೋಗಿವೆಯೇ ಭೂಮಿಯಲ್ಲಿ ಹುದುಗಿದ್ದಾಗ ಮಣ್ಣಿನಲ್ಲಿರಬಹುದಾದ ಆಮ್ಲಗಳ ಸಂಪರ್ಕದಿಂದ ರಾಸಾಯನಿಕ ಮಾರ್ಪಾಟಿಗೆ ಗುರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿ, ಅವಶೇಷಗಳ ಪೈಕಿ ಯಾವುವು ಉಳಿದ ವಸ್ತುಗಳಿಗಿಂತ ಹಿಂದಿನವೆಂದು ನಿರ್ಧರಿಸಬಹುದು. ಭೂ ವಿಜ್ಞಾನ ರೀತ್ಯ ಹಿಮಯುಗದ ಹಿಮಾನಿಗಳಿಂದುಂಟಾದ ಹಲರೀತಿಯ ಗಸ್ಟು ಪದರಗಳ ಕಾಲನಿರ್ಣಯವನ್ನು ಈ ನದೀವೇದಿಕೆಗಳೊಂದಿಗೆ ಸಂಪರ್ಕ ಪಡೆದಿದ್ದ ಅವುಗಳ ಅವಶೇಷಗಳ ನೆರವಿನಿಂದ ಮಾಡಬಹುದು ಹಲವು ಭಾರಿ ವಿನಷ್ಟಪ್ರಾಣಿವರ್ಗ ಅಥವಾ ಮಾನವ ಸಂತತಿಯ ಅವಶೇಷಗಳೊಂದಿಗೆ ಪುರಾತನ ಶಿಲಾಯುಗದ ಅವಶೇಷಗಳು ಸಿಕ್ಕುತ್ತವೆ. ಅಂಥ ಸಂದರ್ಭಗಳಲ್ಲಿ ನಷ್ಟಜೀವಿಶಾಸ್ತ್ರದ ಸಹಾಯದಿಂದ ಅವಶೇಷಗಳ ಸಾಪೇಕ್ಷ ಕಾಲನಿರ್ಣಯ ಮಾಡುವುದು ಸಾಧ್ಯ. ವಿವಿಧ ನೆಲೆಗಳಲ್ಲಿ ದೊರಕುವ ಒಂದೇ ಬಗೆಯ ಅವಶೇಷಗಳ ಅಧ್ಯಯನದಿಂದ ಅವು ಯಾವ ನೆಲೆಯಲ್ಲಿ ಹಿಂದಿನವು. ಅನಂತರ ಕಾಲದಲ್ಲಿ ಯಾವ ನೆಲೆಗಳಿಗೆ ವ್ಯಾಪಾರ, ಸಾಂಸ್ಕøತಿಕ ಪ್ರಸರಣೆ ವಿಧಾನಗಳಿಂದ ಹರಡಿದುವು ಎಂಬುದನ್ನು ನಿರ್ಧರಿಸಬಹುದು. ಇದರಿಂದ ಕಾಲಗಣನೆ ಮಾತ್ರವಲ್ಲದೆ, ವಿವಿಧ ನೆಲೆಗಳ ಪರಸ್ಪರ ಸಂಪರ್ಕಸಂಬಂಧಗಳನ್ನೂ ತಿಳಿಯಬಹುದು. ಇತ್ತೀಚೆಗೆ ಕೆಲವು ವೈಜ್ಞಾನಿಕ ಪದ್ಧತಿಗಳನ್ನೂ ಕಾಲನಿರ್ಣಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಉದಾಹರಣೆಗೆ  ಪ್ಲೂರೀನ್ ವಿಧಾನ: ಭೂಮಿಯಲ್ಲಿ ಹುದುಗಿದ ಮನುಷ್ಯರ ಅಥವಾ ಪ್ರಾಣಿಗಳ ಎಲುಬುಗಳ ಮಣ್ಣಿನಲ್ಲಿರಬಹುದಾದ ಪ್ಲೊರೈಡನ್ನು ಹೀರಿಕೊಳ್ಳುತ್ತವೆ. ಹಾಗೆ ಹೀರಿಕೊಂಡ ಪ್ಲೊರೈಡ್ ಅಧಿಕವಾಗಿರುವ ಮೂಳೆಗಳನ್ನು ಕಡಿಮೆ ಪ್ಲೊರೈಡ್ ಇರುವ ಎಲುಬುಗಳಿಗಿಂತ ಹಳೆಯವೆಂದು ನಿರ್ಧರಿಸಲಾಗುತ್ತದೆ. ಇದೇ ರೀತಿ ನೈಟ್ರಿಕ್ ಆಮ್ಲದಿಂದಲೂ ಸಂಬಂಧ ಸೂಚಕ ಕಾಲನಿರ್ಣಯ ಮಾಡುತ್ತಾರೆ. ಪ್ರಾಚೀನ ಮಣ್ಣಿನ ಪದರಗಳಲ್ಲಿರುವ ಪರಾಗ ವಿಶ್ಲೇಷಣೆಯಿಂದ ಆ ಪದರಗಳ ಸಾಪೇಕ್ಷಕಾಲ ನಿರ್ಣಯವನ್ನಲ್ಲದೆ ಆ ಕಾಲದ ವಾಯುಗುಣ ಮತ್ತು ಪರಿಸರ ವಿಶೇಷಗಳನ್ನೂ ತಿಳಿಯಬಹುದು.

	ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳ ಫಲವಾಗಿ ಪ್ರಾಕ್ತನಶಾಸ್ತ್ರದಲ್ಲಿ ನಿಶ್ಚಿತ ಅಥವಾ ನಿರಪೇಕ್ಷ ಕಾಲಗಣನೆ ಒಂದು ವಿಶಿಷ್ಟಸ್ಥಾನ ಪಡೆದಿದೆ. ಈ ಪದ್ಧತಿಯಲ್ಲಿ ಅವಶೇಷಗಳ ಮತ್ತು ಆ ಸಂಬಂಧದ ಸಂಸ್ಕøತಿಗಳ ಕಾಲವನ್ನು ಇಂತಿಷ್ಟೇ ವರ್ಷಗಳನ್ನು ಪ್ರಾಚೀನವೆಂದು ನಿರ್ಣಯಿಸಬಹುದಾದ್ದರಿಂದ ಇದು ಹೆಚ್ಚು ಉಪಯುಕ್ತವಾದುದಾಗಿದೆ.

	ಈ ಪದ್ಧತಿಯಲ್ಲಿ ಡೆಂಡ್ರೊಕ್ರೂನಾಲಜಿ ಅಥವಾ ಮರಗಳ ಕಾಂಡಗಳಲ್ಲಿ ಕಂಡು ಬರುವ ಬೆಳವಣಿಗೆಯನ್ನು ಸೂಚಿಸುವ ಉಂಗುರ ಅಧ್ಯಯನ ಅಥವಾ ವೃಕ್ಷಕಾಲನುಕ್ರಮ ವಿಜ್ಞಾನ (ಡೆಂಡ್ರೊಕ್ರೂನಾಲಜಿ) ಸಸ್ಯವಿಜ್ಞಾನದ ಕೊಡುಗೆ, ಅಮೆರಿಕ ಖಂಡದ ಹಲವು ನೆಲೆಗಳಲ್ಲಿ ಉಳಿದು ಬಂದಿರುವ ಮರದ ದಿಮ್ಮಿಗಳಲ್ಲಿರುವ ಉಂಗುರಗಳ ಸಹಾಯದಿಂದ ಸು. 2000 ವರ್ಷಗಳಷ್ಟು ಹಿಂದಿನ ಸಂಸ್ಕøತಿಗಳ ಕಾಲಗಣನೆ ಸಾಧ್ಯವಾಗಿದೆ.

	ಜಾಯಿನರ್ ಅವರು ರೂಪಿಸಿದ ಖಗೋಳ ವಿಜ್ಞಾನ ಮೂಲದ ಕಾಲನಿರ್ಣಯ ಪದ್ಧತಿ ಇನ್ನೂ ಶೈಶವಾವಸ್ಥೆಯಲ್ಲಿದೆ. ಸಮಂಜಸ ಕಾಲನಿರ್ಣಯಕ್ಕೆ ಇದು ಅಷ್ಟಾಗಿ ಸಹಾಯಕವಾಗಿಲ್ಲ. ಆದರೂ ಹಿಮಯುಗದ ನೀರ್ಗಲ್ಲ ಪದರಗಳಿಗೆ ಈ ಪದ್ಧತಿಯ ಪ್ರಕಾರ ಆರು ಲಕ್ಷ ವರ್ಷಗಳ ಕಾಲನಿರ್ಣಯ ಮಾಡಲಾಗಿದೆ. ಆದರೆ ಈ ವಿಧಾನವನ್ನು ಕುರಿತಂತೆ ಅನೇಕ ಟೀಕೆಗಳವೆ. ಸಮುದ್ರ ತೀರದಲ್ಲಿ ನೀರ್ಗಲ್ಲ ಪ್ರವಾಹಗಳು ಹಿಂದೆ ಸರಿಯುವಾಗ ಬಿಟ್ಟಿರುವ ಗಸ್ಟು ಪದರಗಳನ್ನು ಎಣಿಕೆ ಮಾಡುವುದರಿಂದ ಆಯಾ ಹಿಮಯುಗಗಳ ಕಾಲವಿಸ್ತಾರವನ್ನು ನಿರ್ಧರಿಸಬಹುದೆಂದು ಬ್ಯಾರೆನ್ ಡಿಗೀರ್ ತೋರಿಸಿಕೊಟ್ಟಿದ್ದಾರೆ. ಉತ್ತರ ಯೂರೋಪಿನ ಸಮುದ್ರ ತೀರಗಳಲ್ಲಿ ಮೊದಲಿಗೆ ಈ ವಿಧಾನವನ್ನು ಬಳಸಲಾಯಿತು. ಇತ್ತೀಚೆಗೆ ಉತ್ತರ ಅಮೆರಿಕದಲ್ಲಿ ಈ ವಿಧಾನದಿಂದ ಅಲ್ಲಿಯ ಶಿಲಾಯುಗ ಸಂಸ್ಕøತಿಗಳನ್ನು 15,000 ವರ್ಷಗಳಷ್ಟು ಹಿಂದಿನವೆಂದು ನಿರ್ಧರಿಸಲಾಗಿದೆ. ಪರಮಾಣು ವಿಜ್ಞಾನದ ಸಂಶೋಧನೆಯ ಫಲವಾಗಿ ಈಚೆಗೆ ಇಂಗಾಲ-14 ಕಾಲಗಣನಾ ವಿಧಾನವನ್ನು ಕಂಡುಹಿಡಿಯಲಾಗಿದೆ. ಪ್ರಾಕ್ತನಶಾಸ್ತ್ರಕ್ಕೆ ಇದರ ಕೊಡುಗೆ ಅದ್ವಿತೀಯವಾದ್ದು. ಪ್ರಪಂಚದ ಅನೇಕ ಪ್ರಾಚೀನ ಸಂಸ್ಕøತಿಗಳಿಗೂ ನಾಗರಿಕತೆಗಳಿಗೂ ಭಾರತದಲ್ಲಿ ನೂತನ ಶಿಲಾಯುಗ, ಹರಪ್ಪಾ ಸಂಸ್ಕøತಿ, ತಾಮ್ರಶಿಲಾಯುಗ ಸಂಸ್ಕøತಿ ಮತ್ತು ಪ್ರಾಗೈತಿಹಾಸಿಕ ಕಬ್ಬಿಣಯುಗದ ಸಂಸ್ಕøತಿಗಳಿಗೂ ಒಂದು ನಿಶ್ಚಿತ ಕಾಲಮಾನವನ್ನು ಈ ವಿಧಾನ ಒದಗಿಸಿದೆ. ಪ್ರಾಕ್ಕಾಂತತ್ವ, ಶಾಖಸಂದೀಪ್ತಿ, ಪೊಟ್ಯಾಸಿಯಮ್, ಆರ್ಗಾನ್ ಕಾಲನಿರ್ಣಯ ವಿಧಾನಗಳು ಇತ್ತೀಚಿನ ಇತರ ವೈಜ್ಞಾನಿಕ ನಿರಪೇಕ್ಷ ಕಾಲಗಣನ ಪದ್ಧತಿಗಳು.

	ತಪ್ಪು ಭಾವನೆಗಳು : ಇಂಥ ಕ್ಲಿಷ್ಟಕರ ಸಂಶೋಧನೆಯಲ್ಲಿ ತೊಡಗಿರುವ ಪ್ರಾಕ್ತನಶಾಸ್ತ್ರಜ್ಞರ ಬಗ್ಗೆ ಜನಸಾಮಾನ್ಯರಲ್ಲಿ ಅನೇಕ ತಪ್ಪುಭಾವನೆಗಳಿವೆ. ಅವು ಸಹಜವೇ. ಆ ತಪ್ಪು ಕಲ್ಪನೆಗಳಿಗೆ ಮೊದಲಿನ ಪ್ರಾಕ್ತನಶಾಸ್ತ್ರಜ್ಞರೇ ಸ್ವಲ್ಪ ಮಟ್ಟಿಗೆ ಕಾರಣರೆನ್ನಬಹುದು. ಪ್ರಾಕ್ತನಶಾಸ್ತ್ರ ಇತ್ತೀಚಿನ ಬೆಳವಣಿಗೆ ಯೂರೋಪಿನ ಬೌದ್ಧಿಕ ಕ್ರಾಂತಿಯ ಹಲವು ವೈಜ್ಞಾನಿಕ ಮುನ್ನಡೆಗಳಲ್ಲಿ ಅದೂ ಒಂದು. 19ನೆಯ ಶತಮಾನದ ಆರಂಭದ ಸುಮಾರಿಗೆ ವಿದ್ವಾಂಸರಲ್ಲಿ ಮಾನವನ ಮೂಲ. ಉಗಮ ಮತ್ತು ಅವನ ಸಂಸ್ಕøತಿಯ ಬೆಳವಣಿಗೆಯ ಬಗ್ಗೆ ಕುತೂಹಲ ಉಂಟಾದಾಗ ಈ ತಪ್ಪುಭಾವನೆಗಳು ಕ್ರಮೇಣ ನಶಿಸತೊಡಗಿದವು. ಅದಕ್ಕೂ ಹಿಂದೆ ಹಲವರು ಪ್ರಾಚೀನ ಕಲಾವಸ್ತುಗಳ ಸಂಗ್ರಹಣೆಯಲ್ಲೂ ಹಿಂದಿನ ಜನರಿಗೆ ಸೇರಿದ ನಿಧಿನಿಕ್ಷೇಪಗಳ ಬೇಟೆಯಲ್ಲೂ ತೊಡಗಿದ್ದರು. ಅವರಿಗೆ ಆ ವಸ್ತುಗಳಿಂದ ಇತಿಹಾಸವನ್ನು ರೂಢಿಸುವ ಉದ್ದೇಶವಿರಲಿಲ್ಲ. ಪ್ರಾಚೀನವಾದ ದುರ್ಗಮ ಅರಣ್ಯ ಅಥವಾ ಪಾಳುಬಿದ್ದ ನಿವೇಶನಗಳಿಂದ ಅಪೂರ್ವ ನಿಧಿನಿಕ್ಷೇಪ ಅಥವಾ ಕಲಾವಸ್ತುಗಳನ್ನು ಹುಡುಕಿ ತರುವ ವ್ಯಕ್ತಿಗಳು ಮಾಂತ್ರಿಕರಂತೆ ಕಾಣಬರುತ್ತಿದ್ದರೆ ಆಶ್ಚರ್ಯವೇನಿಲ್ಲ, ಪ್ರಾಚೀನ ಆಯುಧೋಪಕರಣಗಳು, ಕಲಾವಸ್ತುಗಳು ಮುಂತಾದವು. ಬಹಳ ಹಿಂದಿನ ಕಾಲದಲ್ಲಿ ಈ ಭೂಮಿಯ ಮೇಲೆ ವಾಸಿಸುತ್ತಿದ್ದ ದೈತ್ಯಮಾನವರ ಅಥವಾ ಅಮಾನುಷ ಸತ್ತ್ವ ಹೊಂದಿದ್ದ ಕುಬ್ಜ ಮಾನವರ ನಿರ್ಮಾಣಗಳೆಂದು ಭಾವಿಸಲಾಗಿತ್ತು. ಲೇಯೊನಾರ್ಡೊದ ಮಿಂಚಿನಂಥ ವಿದ್ವಾಂಸರಿಗೆ ಮಾತ್ರ ಈ ಪ್ರಾಚೀನ ವಸ್ತುಗಳು ಮಾನವ ನಿರ್ಮಿತವೆಂದು ಭಾಸವಾಗಿದ್ದವು. ಅಮೆರಿಕ ಸಂಯುಕ್ತ ಸಂಸ್ಥಾನದ ಮೂರನೆಯ ಅಧ್ಯಕ್ಷ ಥಾಮಸ್ ಜೆಫರ್ಸನ್ ಮೊತ್ತಮೊದಲನೆಯ ಪ್ರಾಕ್ತನಶಾಸ್ತ್ರಜ್ಞ. ಅವನು ಅಮೆರಿಕದ ಮೂಲನಿವಾಸಿಗಳಾದ ಇಂಡಿಯನರ ನೆಲೆಗಳನ್ನು 1784ರಲ್ಲಿ ಉತ್ಖನನಮಾಡಿ ಯುಕ್ತ ಟಿಪ್ಪಣಿಗಳನ್ನು ಬರೆದಿಟ್ಟ. 18ನೆಯ ಶತಮಾನದಲ್ಲಿ (ಯೂರೋಪಿನಲ್ಲೂ ಸಂಭವಿಸಿದ ಬೌದ್ಧಿಕ ಕ್ರಾಂತಿಯ ಫಲವಾಗಿ ಗ್ರೀಕ್ ಮತ್ತು ರೋಮನ್ ನಾಗರಿಕತೆಗಳತ್ತ ಗಮನ ಹರಿಯಿತು. ಅವರ ವಾಸ್ತುಶಿಲ್ಪ ಮೂರ್ತಿ) ನಗರಗಳಲ್ಲಿ ವಸ್ತು ಪ್ರದರ್ಶನಾಲಯಗಳು ಹುಟ್ಟಿಕೊಂಡವು. ಹೆಚ್ಚು ವಸ್ತು ಸಂಗ್ರಹಣೆಗಾಗಿ ಪ್ರಾಚೀನ ನಗರ ನೆಲೆಗಳಲ್ಲಿ ಉತ್ಪನ್ನಗಳನ್ನು ಕೈಗೊಳ್ಳಲಾಯಿತು. ಈ ರೀತಿ ಗ್ರೀಕ್-ರೋಮನ್ ಅಥವಾ ಅಭಿಜಾತ ಪ್ರಾಕ್ತನಶಾಸ್ತ್ರದ ಉಗಮವಾಯಿತು. ಆ ಹಂತದಲ್ಲಿ ಪ್ರಾಕ್ತನಶಾಸ್ತ್ರದಲ್ಲಿ ದ್ವಿಮುಖವಾದ ಬೆಳವಣಿಗೆ ಉಂಟಾಯಿತು. ಮೊದಲನೆಯದಾಗಿ ಮಾನವೀಯ ಅಥವಾ ವಸ್ತುಪ್ರದರ್ಶನಾಲಯ ಪ್ರಧಾನವಾದ ಪ್ರಾಕ್ತನಶಾಸ್ತ್ರ. ಎರಡನೆಯದಾಗಿ ಪ್ರಾಕ್ತನ ವಸ್ತುಗಳ ಸಹಾಯದಿಂದ ಮಾನವೇ ಇತಿಹಾಸ ನಿರೂಪಣಾತ್ಮಕವಾದ ಪ್ರಾಕ್ತನಶಾಸ್ತ್ರ. ಮೊದಲನೆಯ ವಿಭಾಗ ಸಹಜವಾಗಿಯೇ ಆಧುನಿಕ ಯೂರೋಪಿನ ನಾಗರಿಕತೆಗಳ ಮೂಲವಾದ ಗ್ರೀಕ್, ರೋಮನ್ ಮತ್ತು ಅವುಗಳ ಪ್ರಾಂತ್ಯಗಳ ಇತಿಹಾಸದ ಶೋಧನೆಗೆ ಸೀಮಿತವಾಯಿತು. ಅದರೊಂದಿಗೆ ಯೂರೋಪಿನ ಈಚಿನ ಜನಾಂಗಗಳ ಫ್ರಾನ್ಸಿನಲ್ಲಿ ಗಾಲರ, ಬ್ರಿಟನ್ನಿನಲ್ಲಿ ಬ್ರಿಟನರ, ಜರ್ಮನಿಯಲ್ಲಿ ಜರ್ಮಾನಿಕ್ ತಂಡಗಳ ಮೂಲಗಳ ಶೋಧಕ್ಕೆ ಗಮನ ಹರಿಸಲಾಯಿತು.

	ಆದರೆ ಕೆಲವರಾದರೂ ಇಡೀ ಮಾನವನ ಇತಿಹಾಸದ ಉಗಮ ಮತ್ತು ಅಭಿವೃದ್ಧಿಯ ಕಡೆಗೆ ಗಮನ ಹರಿಸುವಂತಾಯಿತು. 19ನೆಯ ಶತಮಾನದ ಮಧ್ಯಕಾಲದಲ್ಲುಂಟಾದ ವೈಜ್ಞಾನಿಕ ಸ್ಫೋಟ ಈ ಬೆಳವಣಿಗೆ ಬಹುಮಟ್ಟಿಗೆ ಕಾರಣ. ಚಾಲ್ರ್ಸ್ ಡಾರ್ವಿನನ್ನ ವಿಕಾಸವಾದ, ಟಿ, ಎಸ್, ಹಕ್ಸ್ಲೆಯ ವೈಜ್ಞಾನಿಕ ವಿಚಾರಧಾರೆ, ಭೂಗರ್ಭ ಶಾಸ್ತ್ರಜ್ಞರ ಭೂಮಿಯ ಮತ್ತು ಪ್ರಾಣಿ ಹಾಗೂ ಮಾನವ ಸಂತತಿಗಳ ಪ್ರಾಚೀನತೆಗಳನ್ನು ಕುರಿತು ಹೊಸ ಪರಿಕಲ್ಪನೆಗಳು-ಇವು ಈ ದಿಕ್ಕಿನಲ್ಲಿ ಪ್ರಭಾವ ಬೀರಿದವು. ಎಲ್. ಎಚ್. ಮಾರ್ಗನ್, ಸರ್ ಎಡ್ವರ್ಡ್ ಟೇಲರ್ ಮತ್ತಿತರ ಮಾನವಶಾಸ್ತ್ರಜ್ಞರ ಪ್ರಾಣಿಜಗತ್ತಿನ ವಿಕಾಸವಾದುದನ್ನು ಬೆಳೆಸಿದುದರ ಫಲವಾಗಿ ಅದೇ ಮಾದರಿಯಲ್ಲಿ ಸಾಮಾಜಿಕ ಸಾಂಸ್ಕøತಿಕ ವಿಕಾಸ ಬೆಳೆದುಬಂದಿರಬಹುದೆಂದು ವಿದ್ವಾಂಸರು ಭಾವಿಸುವಂತಾಯಿತು. ಮಾನವತಾವಾದಿಗಳು ಕೇಂದ್ರಸ್ಥಜನಾಂಗಗಳ ಅಧ್ಯಯನಕ್ಕೆ ಪ್ರಾಶಸ್ತ್ಯ ನೀಡಿದರೆ ಮಾನವಶಾಸ್ತ್ರಜ್ಞರು ಸೀಮಾಪರಿಧಿಗಳಲ್ಲಿರುವ ಜನರ ಬಗ್ಗೆ ಹೆಚ್ಚು ಗಮನಹರಿಸುವಂತಾಯಿತು. ಇದರಿಂದ ಪ್ರಾಚೀನ ಮಾನವ ಸಂಸ್ಕøತಿಗೆ ಇತಿಹಾಸದ ಬಗ್ಗೆ ಸಂಯೋಜಿತ ಅಧ್ಯಯನ ನಡೆಯದೆ ಒಂದು ರೀತಿಯ ಅಸ್ತವ್ಯಸ್ತತೆ ತಲೆದೋರಿದಂತಾಯಿತು. ಅಂತಿಮವಾಗಿ ಮಾನವಶಾಸ್ತ್ರೀಯ ಪ್ರಾಕ್ತನಶಾಸ್ತ್ರಜ್ಞರು ವಿಶಿಷ್ಟ ಜನಾಂಗಗಳ ಮತ್ತು ಅರ್ವಾಚೀನ ಆದಿಮ ಜನರ ಸಂಸ್ಕøತಿಯ ಅಧ್ಯಯನಕ್ಕೆ ಮಹತ್ತ್ವ ನೀಡಿದರು. ಈಚಿನ ಐದು ದಶಕಗಳಲ್ಲಿ ಮಾನವತಾವಾದಿಗಳು ಮತ್ತು ಪ್ರಾಕ್ತನಶಾಸ್ತ್ರಜ್ಞರು ತಮ್ಮ ಪರಸ್ಪರ ಪ್ರತ್ಯೇಕ ಮಾರ್ಗಗಳನ್ನು ತೊರೆದುದರಿಂದ ಅಂತಿಮಗುರಿಯಾದ ಮಾನವ ಸಂಸ್ಕøತಿಯ ಅಧ್ಯಯನಕ್ಕೆ ಒಂದು ನಿರ್ದಿಷ್ಟ ರೂಪ ಸಿಕ್ಕಂತಾಯಿತು. ಪ್ರಾಕ್ತನಶಾಸ್ತ್ರಜ್ಞರು ಪ್ರಾಚೀನ ಅವಶೇಷಗಳನ್ನು ಅಥವಾ ಪ್ರಾಣಿಗಳ ಹಾಗೂ ಮಾನವರ ಪಳೆಯುಳಿಕೆಗಳನ್ನು ಅನ್ವೇಷಿಸುತ್ತಾರಾದರೂ ಅವಶೇಷಗಳ ಶೋಧನೆ ತಮ್ಮ ಗುರಿಯಲ್ಲವೆಂದೂ ಅವುಗಳಿಂದ ತಿಳಿಯಬಹುದಾದ ಮಾನವನ ಚಟುವಟಿಕೆಗಳ ಹಾಗೂ ಸಂಸ್ಕøತಿಯ ಇತಿಹಾಸವೆಂದೂ ಆಧುನಿಕ ಪ್ರಾಕ್ತನಶಾಸ್ತ್ರಜ್ಞರು ಅರಿತಿದ್ದಾರೆ. ಪ್ರಾಕ್ತನಶಾಸ್ತ್ರಜ್ಞರು ಸಂಶೋಧಿಸುವುದು ಅವಶೇಷಗಳನ್ನಲ್ಲ. ಅವುಗಳ ಹಿಂದಿರುವ ಮಾನವನನ್ನು ಎಂದು ಮಾರ್ಟಿಮರ್ ವೀಲರ್ ಹೇಳಿದ್ದಾರೆ.

	ಸಮಸ್ಯೆಗಳು : ಪ್ರಾಕ್ತನಶಾಸ್ತ್ರ ಪುರಾತನ ಮಾನವನ ಇತಿಹಾಸದ ಸಂಶೋಧನೆಗೆ ಮೀಸಲಾದ ಜ್ಞಾನಮಾರ್ಗವೆಂದೂ ಲಿಖಿತ ದಾಖಲೆಗಳಿಗೂ ಹಿಂದಿನ ಕಾಲದ ಮಾನವೇತಿಹಾಸದ ಅಧ್ಯಯನಕ್ಕೆ ಪ್ರಾಕ್ತನಶಾಸ್ತ್ರವೊಂದೇ ಮಾರ್ಗವೆಂದೂ ಒಪ್ಪಿಕೊಂಡಾಗ ಹಲವು ಮುಖ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಕೆಲವು ಸಮಸ್ಯೆಗಳು ಮಾನವತಾವಾದಿಗಳ ದೃಷ್ಟಿಯಲ್ಲಿ ಮುಖ್ಯವಾದರೆ ಮತ್ತೆ ಕೆಲವು ಸಮಸ್ಯೆಗಳು ಸಂಶೋಧನಾಪರ ಪ್ರಾಕ್ತನ ವಿದ್ವಾಂಸರ ದೃಷ್ಟಿಯಲ್ಲಿ ಆದ್ಯತೆ ಪಡೆದಿರುವಂಥವು. ಸಮಗ್ರ ದೃಷ್ಟಿಯಿಂದ ಪರಿಶೀಲಿಸಿದಾಗ ಅವೆಲ್ಲವೂ ಮುಖ್ಯ ಸಮಸ್ಯೆಗಳೇ. ಆ ಸಮಸ್ಯೆಗಳಿವು-

	1 ಮಾನವನ, ಅಂದರೆ ಆಯುಧ ನಿರ್ಮಾಪಕನಾದ ಮತ್ತು ಸಾಂಸ್ಕøತಿಕ ವಿಕಾಸಕ್ಕೆ ಮೂಲವಾದ ಮಾನವನ ಉಗಮ ಮತ್ತು ವಿಕಾಸವನ್ನು ತಿಳಿಯುವುದು. 

	2 ದೈಹಿಕವಾಗಿ ಆಧುನಿಕ ಮಾನವನನ್ನು ಹೋಲುವ ಮಾನವ ಮತ್ತು ಅವನ ಬೆಳವಣಿಗೆಯೊಂದಿಗೆ ವಿಕಸಿತವಾದ ಸಂಸ್ಕøತಿಯನ್ನು ತಿಳಿಯುವುದು.

	3 ಆಹಾರೋತ್ಪಾದನೆಯ ಪ್ರಾರಂಭ ಮತ್ತು ಅದರೊಂದಿಗೆ ಆರಂಭವಾದ ಪರಿಣಾಮಕಾರಿಯಾದ ಗ್ರಾಮೀಣ ವ್ಯವಸಾಯ ಮೂಲವಾದ ಸಮಾಜದ ಮೂಲವನ್ನು ಅರಿಯುವುದು.

	4 ಪ್ರಾಕ್ತನಶಾಸ್ತ್ರದ ದೃಷ್ಟಿಯಲ್ಲಿ ನಾಗರೀಕೃತ ಮತ್ತು ರಾಜಕೀಯ ವ್ಯವಸ್ಥೆಯನ್ನು ಹೊಂದಿದ ಸಾರ್ವಜನಿಕ ಭವನಗಳು, ಭವ್ಯ ಸ್ಮಾರಕಗಳು, ವಾಸ್ತುಶಿಲ್ಪ ಮತ್ತು ಬರವಣಿಗೆ ಈ ಲಕ್ಷಣಗಳಿಂದೊಡಗೂಡಿದ ಸಂಸ್ಕøತಿಗಳು ಹೇಗೆ ಉದ್ಭವಿಸಿದವೆಂಬುದನ್ನು ತಿಳಿಯುವುದು.

	5 ಬರವಣಿಗೆ ಇನ್ನೂ ಶೈಶವಾವಸ್ಥೆಯಲ್ಲಿದ್ದ ಪ್ರಾಚೀನ ನಾಗರಿಕತೆಗಳ ಮತ್ತು ಅನಂತರ ಕಾಲದ ಅಥವಾ ಅರ್ವಾಚೀನ ನಾಗರಿಕತೆಗಳ ನಡುವೆ ಸಾಮ್ಯಗಳು ಹೇಗೆ ಉಂಟಾದವೆಂಬುದನ್ನು ಮತ್ತು ಅವುಗಳ ನಡುವೆ ನಡೆದ ಸಾಂಸ್ಕøತಿಕ ವಿನಿಮಯದ ಮಾರ್ಗವನ್ನು ತಿಳಿಯುವುದು.

	6 ಅತಿ ದೀರ್ಘಕಾಲಾವಧಿಯಲ್ಲಿ ಬೆಳೆದುಬಂದ ಈ ಮಾನವೇತಿಹಾಸದಲ್ಲಿ ನಡೆದಿರಬಹುದಾದ ವಿನಿಮಯ, ಪರಸ್ಪರ ಪ್ರಭಾವ, ಹೊಸ ಆವಿಷ್ಕಾರಗಳು, ಪ್ರಸರಣ ಮತ್ತು ನಿರಾಕರಣ ಇವುಗಳ ಅಧ್ಯಯನ.

	ಈ ಸಮಸ್ಯೆಗಳ ಪರಿಹಾರಗಳನ್ನು ತಿಳಿಯುವುದೆಂದರೆ ಲಿಖಿತ ದಾಖಲೆಗಳ ಪೂರ್ವದ ಮಾನವನ ಇತಿಹಾಸ ಸಂಸ್ಕøತಿಗಳನ್ನು ಗ್ರಹಿಸುವುದೇ ಆಗಿದೆ. ಇವಕ್ಕೆ ಸಮಂಜಸ ವಿವರಣೆಗಳನ್ನು ಪಡೆಯುವ ದಿಶೆಯಲ್ಲಿ ಪ್ರಾಕ್ತನಶಾಸ್ತ್ರಕ್ಕೆ ಹಲವು ಅಡೆತಡೆಗಳಿವೆ. ಮೊದಲನೆಯದಾಗಿ, ಅವಶೇಷ ರೂಪದಲ್ಲಿ ಉಳಿದುಬಂದ ಪದಾರ್ಥಗಳಿಂದ ಭೌತಿಕ ಅಥವಾ ವಸ್ತುರೂಪದ ಸಾಂಸ್ಕøತಿಕ ಅಂಶಗಳನ್ನು ತಿಳಿಯಬಹುದೇ ಹೊರತು, ಕೇವಲ ಮನೋಗ್ರಾಹ್ಯವಾದ ಆಚಾರ ವಿಚಾರಗಳು, ನಂಬಿಕೆಗಳು, ಮತೀಯ ಕಲ್ಪನೆಗಳು ಇಂಥವನ್ನು ನೇರವಾಗಿ ತಿಳಿಯಲು ಸಾಧ್ಯವಿಲ್ಲ. ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಅವುಗಳ ಬಗ್ಗೆ ಊಹಿಸಬಹುದು. ಎರಡನೆಯದಾಗಿ, ವಸ್ತುನಿಷ್ಠ ಸಾಂಸ್ಕøತಿಕಾಂಶಗಳನ್ನು ತಿಳಿಯುವಾಗಲೂ ಎಷ್ಟರಮಟ್ಟಿಗೆ ಪ್ರಾಕ್ತನಶಾಸ್ತ್ರಜ್ಞರಿಗೆ ದೊರಕುವ ಅವಶೇಷಗಳು ಪೂರ್ಣವಾಗಿಯೆಂಬುದು ಮುಖ್ಯವಾದದ್ದು. ಆಗ ದೊರಕುವ ಅವಕಾಶಗಳು ಅವುಗಳ ನಿರ್ದಿಷ್ಟ ಸನ್ನಿವೇಶದಲ್ಲಿದ್ದರೆ ಅವಕ್ಕೆ ಚಾರಿತ್ರಿಕ ಮಹತ್ತ್ವ ಇರುತ್ತದೆ. ಪ್ರಾಕ್ತನಶಾಸ್ತ್ರದಲ್ಲಿ ಯಾವುದೇ ಅವಶೇಷಕ್ಕೆ ಸಂಬಂಧಸೂಚಕ ಸನ್ನಿವೇಶ ಪ್ರಧಾನವಾದುದು. ಮೊದಲಿಗೆ ಅದರ ನಿರ್ಮಾಣವಾದಾಗ ಮಾನವ ಯಾವ ಉದ್ದೇಶಕ್ಕಾಗಿ, ಯಾವ ರೀತಿನೀತಿಯಲ್ಲಿ ಮತ್ತು ಯಾವ ಪದಾರ್ಥಗಳೊಂದಿಗೆ ಅದನ್ನು ಬಳಸಿದನೆಂಬುದನ್ನು ತಿಳಿದರೆ ಆ ವಸ್ತುವಿನ ಸಾಂಸ್ಕøತಿಕ ಹಿನ್ನಲೆ ಅರ್ಥವಾಗುತ್ತದೆ. ಮತ್ತೆ ಅದರೊಂದಿಗೆ ದೊರಕುವ ಇತರ ಅವಶೇಷಗಳಿಗೆ ಅದು ಹೊಂದಿಕೊಳ್ಳಬೇಕು. ಆದ್ದರಿಂದ ಯಾವುದೇ ಅವಶೇಷದ ನಿಜವಾದ ಐತಿಹಾಸಿಕ ಮಾಹಿತಿಯನ್ನು ವಿಶ್ಲೇಷಿಸಬೇಕಾದರೆ ಪ್ರಾಕ್ತನಶಾಸ್ತ್ರಜ್ಞರು ಅದನ್ನು ಆಬಾಧಿತವಾದ ಪದರಗಳಿಂದ ಅಗೆದುತೆಗೆಯಬೇಕಲ್ಲದೆ ಅಂಥ ಪದರಗಳಲ್ಲಿರುವ ಇತರ ವಸ್ತುಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಬೇಕು. ಉತ್ಖನನದ ಅನಂತರ ವರದಿಯನ್ನು ಸಿದ್ದಪಡಿಸುವಾಗ ಬೇಕಾಗುವ ದಾಖಲೆಗಳನ್ನು, ಅಂದರೆ ಛಾಯಾಚಿತ್ರಗಳು, ನಕ್ಷೆಗಳು, ಪದರಗಳ ಅನುಪೂರ್ವಿ ರೇಖಾಚಿತ್ರಗಳನ್ನು ಮತ್ತು ವಿಸ್ತøತವಾದ ಟಿಪ್ಪಣಿಗಳನ್ನು ತಯಾರಿಸಿಕೊಳ್ಳಬೇಕು (ನೋಡಿ- ಉತ್ಖನನ) ನಿರ್ದಿಷ್ಟ ಸನ್ನಿವೇಶ ರಹಿತವಾದ ಅಸಂಖ್ಯಾತ ಅವಶೇಷಗಳು ಅವುಗಳ ಐತಿಹಾಸಿಕ ಅಥವಾ ಪ್ರಾಕ್ತನ ಮಹತ್ತ್ವವನ್ನು ಕಳೆದುಕೊಂಡಿವೆ.

	ಪ್ರಾಕ್ತನಾವಶೇಷಗಳ ಸಮೂಹ ಎಂಬ ಪದಗುಚ್ಛ, ಒಂದು ಸಂಸ್ಕøತಿಯ ಜನರು ತಯಾರಿಸಿದ ಮತ್ತು ನೈಸರ್ಗಿಕ ಪದಾರ್ಥಗಳ ಸಮಗ್ರತೆಯನ್ನು ಸೂಚಿಸುತ್ತದೆ. ಅಂಥ ಎಲ್ಲ ಮಾಹಿತಿಗಳಿಂದ ದೊರಕಬಹುದಾದ ಸಾಂಸ್ಕøತಿಕ ಚಿತ್ರಣವನ್ನು, ಜನಜೀವನ ರೀತಿಯನ್ನು ಒಟ್ಟಾಗಿ ತಿಳಿದಾಗ ಮಾತ್ರ ಒಂದು ಕಾಲದ ಒಂದು ಪ್ರದೇಶದ ಅಥವಾ ಜನಾಂಗದ ಇತಿಹಾಸವನ್ನು ತಿಳಿಯಲು ಸಾಧ್ಯ. ಉದಾಹರಣೆಗೆ: ನವಶಿಲಾಯುಗದ ಒಂದು ನೆಲೆಯನ್ನು ಸಂಶೋಧಿಸಿದಾಗ ಅಲ್ಲಿ ಬೇಟೆಗೆ ಬೇಕಾದ ಸಲಕರಣೆಗಳು, ಮೀನು ಹಿಡಿಯಲು ಬಳಸುವ ಸಾಮಗ್ರಿಗಳು, ವ್ಯವಸಾಯಕ್ಕೆ ಬೇಕಾದ ಉಪಕರಣಗಳು ಕಂಡುಬರುವುದರಿಂದ ಆ ಜನರು ತಮ್ಮ ಜೀವನ ನಿರ್ವಹಣೆಗೆ ಈ ಎಲ್ಲ ವೃತ್ತಿಗಳಲ್ಲಿ ತೊಡಗಿದ್ದರೆಂದು ತಿಳಿಯಬಹುದು, ಬೀಸುವ, ಅರೆಯುವ ಕಲ್ಲುಗಳು ದೊರಕಿದರೆ ಅವರು ಧಾನ್ಯವನ್ನು ಬೀಸಿ ಅಥವಾ ಅರೆದು ಆಹಾರ ತಯಾರಿಸುತ್ತಿದ್ದರೆಂದು ಊಹಿಸಬಹುದು, ಭೂಮಿಯೊಳಗೆ ಕಂಡುಬರುವ ಹಗೇವು ಅಥವಾ ಧಾನ್ಯಶೇಖರಣೆಯ ಗುಂಡಿಗಳು ಅಥವಾ ಸುಟ್ಟಮಣ್ಣಿನ ಕಣಜದಂಥ ಜಾಡಿಗಳಿಂದ ಅವರು ಧಾನ್ಯಗಳನ್ನು ಶೇಖರಿಸಿಡುತ್ತಿದ್ದ ವಿಧಾನಗಳನ್ನು ತಿಳಿಯಬಹುದು.  ಅವರ ನೆಲೆಗಳಲ್ಲಿ ಕಂಡುಬರುವ ಮರದ ಕಂಬಗಳನ್ನು ನೆಡಲು ಉಪಯೋಗಿಸಿದ ಗುಂಡಿಗಳಿಂದ ಅಥವಾ ಕಂಬಗಳ ಅಡಿಗೆ ಉಪಯೋಗಿಸಿದ ಚಪ್ಪಟೆ ಕಲ್ಲುಗಳಿಂದ, ನಾಶವಾದರೂ ಗುರುತನ್ನು ಬಿಟ್ಟಿರುವ ಮರದ ಎಲೆ ಮತ್ತು ಹುಲ್ಲುಗರಿಗಳ ಅವಶೇಷಗಳಿಂದ ಅದರ ವಾಸಕ್ಕೆ ನಿರ್ಮಿಸಿಕೊಳ್ಳುತ್ತಿದ್ದ ಗುಡಿಸಿಲುಗಳ ಪರಿಚಯ ಪಡೆಯಬಹುದು. ಒಂದೊಂದು ಗುಡಿಸಿಲಿನಲ್ಲಿ ದೊರಕುವ ಮಣ್ಣಿನ ಪಾತ್ರೆಗಳು ಮತ್ತ್ತು ಕಲ್ಲಿನ ಆಯುಧ ಉಪಕರಣಗಳಿಂದ ಅವರ ಜೀವನ ರೀತಿ. ತಾಂತ್ರಿಕ ನೈಪುಣ್ಯ ಇವನ್ನು ಪರಿಚಯಿಸಿಕೊಳ್ಳಬಹುದು. ಮನೆಗಳ ನೆಲಗಟ್ಟಿನಡಿಯಲ್ಲೋ ವಸತಿಯ ಹೊರಭಾಗದಲ್ಲೋ ಇರುವ ಸಮಾಧಿಗಳಿಂದ ಮೃತರ ಬಗ್ಗೆ ಅವರ ಭಾವನೆಗಳನ್ನೂ ಮತೀಯ ನಂಬಿಕೆಗಳನ್ನೂ ಊಹಿಸಿಕೊಳ್ಳಬಹುದು. ಆದರೆ ದುರದೃಷ್ಟವಶಾತ್ ಅಂಥ ಅವಶೇಷಗಳಲ್ಲಿ ಬಹುಭಾಗದ ವಸ್ತುಗಳು ಬಹಳ ಬೇಗ ನಶಿಸಿ ಹೋಗುವುದರಿಂದ ಪ್ರಾಕ್ತನಶಾಸ್ತ್ರಜ್ಞರಿಗೆ ದೊರಕುವ ಮಾಹಿತಿಗಳು ಅತಿ ಸೀಮಿತವಾಗಿರುತ್ತವೆ. ಕೆಲವೊಮ್ಮೆ ವಿಶಿಷ್ಟ ಪರಿಸ್ಥಿತಿಯಲ್ಲಿ ಮೂಳೆ, ಮರ, ದಂತ, ಕೊಂಬು ಮುಂತಾದ ಪದಾರ್ಥಗಳಿಂದ ಮಾಡಿದ ವಸ್ತುಗಳು ಫಾಸಿಲುಗಳಾಗಿ ಮಾರ್ಪಟ್ಟು ಎಷ್ಟು ಕಾಲವಾದರೂ ಉಳಿದುಬರುತ್ತದೆ. ಕಲ್ಲು ಸುಟ್ಟ ಮಣ್ಣು ಮತ್ತು ಕೆಲವು ಲೋಹಗಳಿಂದ ಮಾಡಿ ವಸ್ತುಗಳು ದೀರ್ಘಕಾಲ ಉಳಿದು ಬರುತ್ತವೆ. ಸಾವಯವ ಪದಾರ್ಥಗಳಿಂದ ತಯಾರಿಸಿದ ವಸ್ತುಗಳು ನಶಿಸಿಹೋದರೂ ಮಣ್ಣಿನಲ್ಲಿ ತಮ್ಮ ಕುರುಹುಗಳನ್ನು ಉಳಿಸಿರುತ್ತವೆ. ಅಂಥ ಮಣ್ಣನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ, ಯಾವ ಪದಾರ್ಥಗಳು ಆ ರೀತಿ ನಷ್ಟಗೊಂಡಿವೆಯೆಂದು ತಿಳಿಯಲು ಸಾಧ್ಯ. ಕೆಲವು ಪ್ರಾಚೀನ ಸಂಸ್ಕøತಿಗಳ ಅಂಗವಾದ ಸಮಾಧಿಗಳಲ್ಲಿ (ಉದಾಹರಣೆಗೆ ಈಜಿಪ್ಪಿನ ಪಿರಮಿಡ್ಡುಗಳು, ರಾಜರ ಸಮಾಧಿಗಳು) ಮೃತರು ಜೀವಿತ ಕಾಲದಲ್ಲಿ ಬಳಸುತ್ತಿದ್ದ ಅಸಂಖ್ಯಾತ ವಸ್ತುಗಳನ್ನು ಇಟ್ಟಿರುತ್ತಿದ್ದುದರಿಂದ ಅವು ಬಹುಮಟ್ಟಿಗೆ ಸುರಕ್ಷಿತವಾಗಿ ಪ್ರಾಕ್ತನಶಾಸ್ತ್ರಜ್ಞರಿಗೆ ಲಭಿಸಿವೆ. ನಿಸರ್ಗದ ದಾಳಿಗೆ ಒಮ್ಮೆಯೇ ತುತ್ತಾದ ಪಾಂಪೇ ನಗರದಂಥ ನೆಲೆಗಳೂ ಆಗಿನ ಸಂಸ್ಕøತಿಯ ಸಮಗ್ರ ಚಿತ್ರಗಳನ್ನು ಒದಗಿಸುತ್ತವೆ.

	ಇಪ್ಪತ್ತನೆಯ ಶತಮಾನದ ಮಧ್ಯಭಾಗದ ತನಕವೂ ಪ್ರಾಕ್ತನಶಾಸ್ತ್ರ ಶೈಶವಾವಸ್ಥೆಯಲ್ಲಿ ಇತ್ತೆಂದು ಹೇಳಬಹುದು. ಮಾನವೇತಿಹಾಸದ ರಚನೆಯೇ ಗುರಿಯಾಗಿದ್ದವರು ಹಲವರಿದ್ದರೂ ಪ್ರಾಚೀನ ವಸ್ತುಗಳನ್ನು, ಅದರಲ್ಲೂ ಸುಂದರವಾದ ಕಲಾಕೃತಿಗಳನ್ನು ಅಥವಾ ಪ್ರಾಚೀನ ನೆಲೆಗಳಲ್ಲಿ ದೊರಕಬಹುದಾದ ನಿಧಿ ನಿಕ್ಷೇಪಗಳನ್ನು ಸಂಗ್ರಹಿಸಲು ಆತುರರಾಗಿದ್ದ ಹವ್ಯಾಸಿ ಪುರಾತತ್ವಜ್ಞರು ಹೆಚ್ಚಾಗಿದ್ದರು. ಅಂಥವರ ಚಟುವಟಿಕೆಗೆಳಿಂದ ಸುಮಾರು ನೆಲೆಗಲ್ಲಿದ್ದ ಮಾಹಿತಿಗಳು ಹಾಳಾದವು. ಅವಶೇಷಗಳನ್ನು ಅವರು ಸಂಗ್ರಹಿಸಿದರೂ ಅವುಗಳ ಸನ್ನಿವೇಶ ಮತ್ತು ಅವುಗಳೊಡನೆ ದೊರಕುವ ಅಷ್ಟು ಆಕರ್ಷಕವಲ್ಲದ ವಸ್ತುಗಳು-ಇವುಗಳ ನಿರಾಕರಣೆಯಿಂದ ಪ್ರಾಕ್ತನಶಾಸ್ತ್ರಕ್ಕೆ ಹೆಚ್ಚು ಅನ್ಯಾಯವಾಗಿದೆ. ಈಚಿನ ಮೂರು ದಶಕಗಳಲ್ಲಿ ವಿದ್ವಾಂಸರಿಗೆ ಈ ನಷ್ಟದ ಅರಿವಾಗಿ ಅದರ ತಡೆಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಅವಧಿಯಲ್ಲಿ ವೈಜ್ಞಾನಿಕ ಸಂಶೋಧನೆಗಳು ಪ್ರಾಕ್ತನಶಾಸ್ತ್ರಕ್ಕೆ ಹೆಚ್ಚಾದ ನೆರವು ನೀಡಲಾರಂಭಿಸಿವೆ. ಪ್ರಾಕ್ತನ ನೆಲೆಗಳ ಶೋಧನೆ, ಅವಶೇಷಗಳ ಸಂಗ್ರಹಣೆ, ಜೀರ್ಣಗೊಳ್ಳುತ್ತಿರುವ ಅವಶೇಷಗಳ ಪರಿಷ್ಕರಣ, ಅವುಗಳ ಕಾಲನಿರ್ಣಯ ಆ ವಸ್ತುಗಳ ಅಥವಾ ಸಂಸ್ಕøತಿಯ ಪರಿಸರದ ಪುನಾರಚನೆ ಮುಂತಾದ ಕಾರ್ಯಗಳಲ್ಲಿ ವಿಜ್ಞಾನದ ಕೊಡುಗೆ ಗಣನೀಯವಾಗಿ ಹೆಚ್ಚುತ್ತಿದೆ. ಹಾಗಾಗಿ ಪ್ರಾಕ್ತನಶಾಸ್ತ್ರಜ್ಞ ಈಚಿನ ವರ್ಷಗಳಲ್ಲಿ ಆದಿಮಾನವನ ಸಂಸ್ಕøತಿಯ ಪುನರ್ನಿರ್ಮಾಣ ಕಾರ್ಯದಲ್ಲಿ ಸಾಫಲ್ಯ ಪಡೆಯಬಹುದಾಗಿದೆ.

	ಒಟ್ಟಿನಲ್ಲಿ ಪ್ರಾಕ್ತನ ದಾಖಲೆಗಳು ಅಪೂರ್ಣವಾದರೂ ನಿರಾಶೆಹೊಂದಬೇಕಾದಷ್ಟು ಅಲ್ಲ. ಆ ಶಾಸ್ತ್ರ ಅಭಿವೃದ್ದಿಗೊಂಡಂತೆ ಹೊಸ ಹೊಸ ವಿಧಾನಗಳು ಬಳಕೆಗೆ ಬಂದಂತೆ ತನ್ನ ಧ್ಯೇಯ ಸಾಧನೆಯಲ್ಲಿ ಹೊಸ ಮಜಲುಗಳನ್ನು ತಲುಪುತ್ತಿವೆ.

	ಅಧ್ಯಯನ ವ್ಯವಸ್ಥೆಯ ನಿರ್ಮಾಣ: ಪ್ರಾಕ್ತನಶಾಸ್ತ್ರಜ್ಞರಿಗೆ ಮಾನವನಿರ್ಮಿತ ಅವಶೇಷಗಳು ನೂರುಗಟ್ಟಲೆ ಮತ್ತು ಮಾನವನ ಬಳಸಿದ ವಸ್ತುಗಳು ಸಾವಿರಗಟ್ಟಲೆ ದೊರಕುತ್ತವೆ. ಇಷ್ಟೊಂದು ಅಗಾಧ ಸಂಖ್ಯೆಯ ವಸ್ತುಗಳ ಅಧ್ಯಯನ ಮಾಡುವ ಮುನ್ನ ಅವನ್ನು ಕೆಲವು ನಿರ್ದಿಷ್ಟ ಸೂತ್ರಗಳಿಗೆ ಅನುಸಾರವಾಗಿ ವರ್ಗಿಕರಿಸಬೇಕು ಮತ್ತು ಗೊಂದಲನಿವಾರಣೆಗಾಗಿ ನಿರ್ದಿಷ್ಟ ಪರಿಭಾಷೆಯನ್ನು ನಿಗದಿಗೊಳಿಸಬೇಕು. 

	ಮೊದಲಿಗೆ ಪ್ರಾಕ್ತನಶಾಸ್ತ್ರಜ್ಞರು ವಸ್ತುಗಳನ್ನು ತಯಾರಿಸಲು ಬಳಸಿದ ಸಾಮಗ್ರಿ ಅಥವಾ ತಯಾರಿಕಾ ತಂತ್ರದ ಆಧಾರದ ಮೇಲೆ ಅವಶೇಷಗಳನ್ನು ವರ್ಗೀಕರಿಸುತ್ತಿದ್ದರು. ಉದಾಹರಣೆಗೆ ಕಲ್ಲಿನ ಆಯುಧಗಳು, ಲೋಹದ ವಸ್ತುಗಳು, ಸುಟ್ಟಮಣ್ಣಿನ ಉಪಕರಣಗಳು: ಅಥವಾ ಕಲ್ಲಿನ ಸುತ್ತಿಗೆಗಳಿಂದ ಹೊಡೆದು ಚಕ್ಕೆಗಳನ್ನು ತೆಗೆಯುವ ವಿಧಾನ, ಒತ್ತಡದಿಂದ ಚಕ್ಕೆಗಳನ್ನು ತೆಗೆಯುವ ವಿಧಾನ ಇತ್ಯಾದಿ. ಈ ಪದ್ಧತಿ ಅಷ್ಟು ಉಪಯುಕ್ತವಾಗಿರಲಿಲ್ಲ: ಏಕೆಂದರೆ ಹಲವು ಬಾರಿ ಬೇರೆ ವರ್ಗಕ್ಕೆ ಸೇರಿದ ವಸ್ತುಗಳನ್ನು ಒಂದೇ ಗುಂಪಿಗೆ ಸೇರಿಸಬಹುದಾಗಿತ್ತು. ಅಲ್ಲದೆ ವಿವಿಧ ತಯಾರಿಕಾ ತಂತ್ರಗಳು ಒಟ್ಟಾಗಿಯೋ ಅಥವಾ ಪರಸ್ಪರ ಹೊರತಾಗಿಯೋ ಉಪಯೋಗದಲ್ಲಿದ್ದುದಾಗಿ ಕಂಡುಬರುತ್ತವೆ. ಈಚೆಗೆ ಅವಶೇಷಗಳ ಆಕಾರ ಮತ್ತು ಉಪಯೋಗಗಳ ಆಧಾರದ ಮೇಲೆ ವರ್ಗೀಕರಣ ಮಾಡುತ್ತಾರೆ. ಕೆಲವೊಮ್ಮೆ ಎರಡು ಪದ್ಧತಿಗಳನ್ನೂ ಬಳಸಿಕೊಂಡು ಅವಶೇಷಗಳನ್ನು ಅನೇಕ ಉಪವರ್ಗಗಳಾಗಿ ವಿಂಗಡಿಸಬಹುದು. ಉಪಕರಣಗಳ ತಯಾರಿಕೆ ಮತ್ತು ಅವುಗಳ ಉದ್ದೇಶಿತ ಉಪಯೋಗಗಳೇನೆಂಬುದನ್ನು ತೀರ್ಮಾನಿಸುವುದು ಎರಡು ಪ್ರತ್ಯೇಕ ಚಟುವಟಿಕೆಗಳು. ಹಾಗಾಗಿ ಅವುಗಳ ತಯಾರಿಕೆಗೆ ಅವುಗಳ ಸಾಂಸ್ಕøತಿಕ ಮಹತ್ವವೇನೆಂಬುದು ಆಧಾರದ ಮೇಲೆ ಪ್ರಾಕ್ತನಶಾಸ್ತ್ರಜ್ಞರು ತಮ್ಮ ವಿಶಾಲಾನುಭವದ ಆಧಾರದ ಮೇಲೆ ಆಯುಧೋಪಕರಣಗಳಿಂದ ಐತಿಹಾಸಿಕ ಸಾಂಸ್ಕøತಿಕ ಮಾಹಿತಿಗಳನ್ನು ಸಂಗ್ರಹಿಸಬೇಕಾಗುತ್ತದೆ. ಉದಾಹರಣೆಗೆ ಮತೀಯ ಚಟುವಟಿಕೆಗಳಿಗಾಗಿ ತಯಾರಿಸಿದ ಪದಾರ್ಥಗಳು ಕೆಲವು ಭೌತಿಕ ಕಾರ್ಯಗಳಿಗೆ ಉಪಯೋಗಿಸುವ ವಸ್ತುಗಳನ್ನು ಹೋಲಬಹುದು; ಆದರೆ ಅವು ದೊರೆತ ಪರಿಸರ ಮತ್ತು ಅವುಗಳೊಂದಿಗೆ ಸಿಕ್ಕ ಇತರ ಅವಶೇಷಗಳ ಸಹಾಯದಿಂದ ಅವುಗಳ ಉದ್ದೇಶವನ್ನು ಅರಿಯಬೇಕಾಗುತ್ತದೆ.

	ಒಂದೇ ಆಕಾರದ ಸಹಸ್ರಾರು ವಸ್ತುಗಳನ್ನು ವರ್ಗೀಕರಿಸುವಾಗ ಅವುಗಳ ನಡುವೆ ಕಂಡುಬರುವ ಸಣ್ಣ ಪುಟ್ಟ ವ್ಯತ್ಯಾಸಗಳು ತಯಾರಿಕೆಯ ವೈಪರೀತ್ಯದಿಂದಿರಬಹುದು ಅಥವಾ ಬದಲಾಗುತ್ತಿದ್ದ ತಾಂತ್ರಿಕ ನೈಪುಣ್ಯದಿಂದ ಉಂಟಾಗಿರಬಹುದು. ಅಂಥ ಸಂದರ್ಭಗಳಲ್ಲಿ ಒಂದು ಪ್ರಾತಿನಿಧಿಕ ಮಾದರಿಯನ್ನು ಆಯ್ದುಕೊಳ್ಳಬೇಕಾಗುತ್ತದೆ.

	ಪ್ರಾಕ್ತನಶಾಸ್ತ್ರದಲ್ಲಿ ಬಳಸುವ ಪಾರಿಭಾಷಿಕ ಶಬ್ದಗಳನ್ನು ಶಿಷ್ಟೀಕರಿಸುವುದು ಕಷ್ಟ ಸಾಧ್ಯ. ವಿವಿಧ ಪ್ರದೇಶಗಳಲ್ಲಿ, ವಿವಿಧ ವಿದ್ವಾಂಸರಲ್ಲಿ ಇರಬಹುದಾದ ಮನೋವೈಕಲ್ಯಗಳು ಮತ್ತು ಆಯಾ ಸಂಸ್ಕøತಿಯ ಅಧ್ಯಯನದಲ್ಲಿ ಕಂಡುಬರುವ ಪ್ರಗತಿಯ ಹಂತಗಳ ಪ್ರಭಾವಗಳಿಂದ ಪಾರಿಭಾಷಿಕ ಶಬ್ದಗಳಲ್ಲಿ ವೈಪರೀತ್ಯ ಉಂಟಾಗುತ್ತದೆ. ಉದಾಹರಣೆಗೆ ಭಾರತೀಯ ಪುರಾತತ್ವ ಅಧ್ಯಯನದಲ್ಲಿ 1961ರ ತನಕ ಬಳಸುತ್ತಿದ್ದ ಐರೋಪ್ಯ ಮೂಲದ ಕೆಳಗಣ ಪೂರ್ವಶಿಲಾಯುಗ, ಮಧ್ಯಪೂರ್ವಶಿಲಾಯುಗ ಮತ್ತು ಮೇಲಣ ಪೂರ್ವಶಿಲಾಯುಗ ಎಂಬ ಪದಗಳನ್ನು ಅನಂತರ ಕೈಬಿಟ್ಟು ಮೊದಲ, ದ್ವಿತೀಯ ಮತ್ತು ತೃತೀಯ ಸರಣಿಯ ಶಿಲಾಯುಗಗಳೆಂಬ ಪದಗಳನ್ನು ಬಳಸಲಾಯಿತು. 1961ರ ಡಿಸೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದ ಏಷ್ಯಾದ ಪ್ರಾಕ್ತನಶಾಸ್ತ್ರಕ್ಕೆ ಸಂಬಂಧಿಸಿದ ಅಂತರಾಷ್ಟ್ರೀಯ ಪುರಾತತ್ವಜ್ಞರ ಸಮ್ಮೇಳನದಲ್ಲಿ ಆದಿ, ಮಧ್ಯ, ಅಂತ್ಯ ಶಿಲಾಯುಗಗಳೆಂಬ ಪದಗಳನ್ನು ಬಳಸಬೇಕೆಂದು ತೀರ್ಮಾನಿಸಲಾಯಿತು. ಹಲವು ಬಾರಿ ಹೊಸ ಪ್ರಾದೇಶಿಕ ಸಂಸ್ಕøತಿಗಳಿಗೆ ಹೊಸ ಪದಗಳನ್ನು ಸೃಷ್ಟಿಸಬೇಕಾಗುತ್ತದೆ. ಅಥವಾ ಒಂದೇ ವಿಸ್ತøತ ಸಂಸ್ಕøತಿಯಲ್ಲಿ ಕಂಡುಬರುವ ಪ್ರಾದೇಶಿಕ ಸಂಸ್ಕøತಿಗಳಿಗೆ ಹೊಸ ಹೆಸರುಗಳನ್ನು ನೀಡಬೇಕಾಗುತ್ತದೆ. ಹಲವುಬಾರಿ ಕಾಲಸೂಚಕ ಪದಗಳನ್ನು ಬಳಸಿದ್ದರೂ ಕ್ರಮೇಣ ಅವು ಇತರ ಪ್ರದೇಶಗಳಲ್ಲಿ ಸಾಂಸ್ಕøತಿಕ ಅರ್ಥವನ್ನು ಪಡೆದುಕೊಳ್ಳುತ್ತದೆ. ಈ ಕಾರಣಗಳಿಂದ ಪ್ರಾಕ್ತನಶಾಸ್ತ್ರಜ್ಞರು ತಮ್ಮ ಬರವಣಿಗೆಗಳಲ್ಲಿ ವಿವಿಧ ಪದಗಳನ್ನು ಯಾವ ಯಾವ ಅರ್ಥಗಳಲ್ಲಿ ಬಳಸಿದ್ದಾರೆ ಮತ್ತು ಆ ಹಿಂದಿನ ಅಥವಾ ಅದೇ ಕಾಲದಲ್ಲಿ ಇತರ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಪದಗಳಿಗೆ ಅವುಗಳ ಸಂಬಂಧವೇನು ಎಂಬುದನ್ನು ಸ್ಪಷ್ಟೀಕರಿಸಬೇಕು.

	ಪ್ರಾಕ್ತನಶಾಸ್ತ್ರಜ್ಞರು ಸಾಮಾನ್ಯವಾಗಿ ಒಂದು ಸಂಸ್ಕøತಿಗೆ ಅದು ಮೊದಲು ಕಂಡುಬಂದ ನೆಲೆಯ ಅಥವಾ ಪ್ರದೇಶದ ಆಧಾರದ ಮೇಲೆ ನಾಮಕರಣ ಮಾಡುತ್ತಾರೆ. ಉದಾಹರಣೆಗೆ ಅಪ್ಯೂಲಿಯಸ್ ಮೌಸ್ಟೀರಿಯನ್, ಸಿಂಧೂತೀರದ ನಾಗರಿಕತೆ ಇತ್ಯಾದಿ. ಕ್ರಮೇಣ ಆ ಸಂಸ್ಕøತಿ ಬೇರೆ ದೇಶ ಕಾಲಗಳಲ್ಲಿ ಹರಡುತ್ತಿದ್ದಂತೆ ಹಲವಾರು ಬದಲಾವಣೆಗಳು ಏರ್ಪಡಬಹುದು. ಅಂಥ ಸಂದರ್ಭಗಳಲ್ಲಿ ಮೂಲದ ಪದವನ್ನು ಬದಲಾಯಿಸಬೇಕಾಗುತ್ತದೆ. ಭಾರತದಲ್ಲಿ ಕಂಡುಬರುವ ಪೂರ್ವ ನಿಯೋಜಿತ ಗಟ್ಟಿ (ಪ್ರಿ ಪೇರ್ಡ್ ಕೋರ್) ತಂತ್ರ ಯೂರೋಪಿನಲ್ಲಿ ಕಂಡುಬರುವ ಲೆವಾಲ್ವಾಸಿಯನ್ ಚಕ್ಕೆ ತೆಗೆಯುವ ವಿಧಾನಕ್ಕೆ ಮೂಲಭೂತವಾಗಿ ಹೋಲುತ್ತಿದ್ದರೂ ಅದಕ್ಕೆ ಫ್ರಾನ್ಸಿನಲ್ಲಿರುವ ಸಾಂಸ್ಕøತಿಕ ಹಿನ್ನೆಲೆ ಮತ್ತು ವೈವಿಧ್ಯ ಭಾರತದಲ್ಲಿಲ್ಲ; ಆದ್ದರಿಂದ ಭಾರತದಲ್ಲಿ ಲೆವಾಲ್ವಾಸಿಯನ್ ಸಂಸ್ಕøತಿ ಎಂಬ ಪದ ಯುಕ್ತವಾಗುವುದಿಲ್ಲ.

	ಪ್ರಾಕ್ತನ ಸಂಶೋಧನೆಗಳನ್ನು ಸಮಗ್ರ ರೀತಿಯಲ್ಲಿ ವೈಜ್ಞಾನಿಕವಾಗಿ ನಡೆಸಬೇಕಾದರೆ ಬಹಳ ಆರ್ಥಿಕ ಸಂಪತ್ತು ಬೇಕಾಗುತ್ತದೆ. ಆರ್ಥಿಕ ಮುಗ್ಗಟ್ಟಿನ ಈ ಕಾಲದಲ್ಲಿ ಜನೋಪಯೋಗಿ ಯೋಜನೆಗಳಿಗೆ ಬಳಸಬೇಕಾದ ಮಾನವ ಶಕ್ತಿಸಂಪತ್ತುಗಳನ್ನು ಈ ದಿಶೆಯಲ್ಲಿ ಬಳಸುವುದು ಪೋಲು ಮಾಡಿದಂತೆಂದು ಅನೇಕ ರಾಜಕಾರಣಿಗಳ ಮತ್ತು ಸರ್ಕಾರಗಳ ಭಾವನೆ ಅನೇಕ ಪಾಶ್ಚಾತ್ಯ ರಾಷ್ಟಗಳಲ್ಲಿ 20ನೆಯ ಶತಮಾನದ ಆದಿಭಾಗದವರೆಗೂ ಸರ್ಕಾರಗಳು ಪ್ರಾಕ್ತನಶಾಸ್ತ್ರಕ್ಕೆ ಆರ್ಥಿಕ ನೆರವು ನೀಡುತ್ತಿರಲಿಲ್ಲ. ವೈಜ್ಞಾನಿಕ ಕ್ರಾಂತಿ ಮತ್ತು ಬೌದ್ಧಿಕ ಪುನರುಜ್ಜೀವನಗಳ ಪ್ರಭಾವದಿಂದ ಹೆಚ್ಚು ವಿದ್ವಾಂಸರು ಈ ಕಡೆ ಗಮನ ಹರಿಸಿದಾಗ ಮತ್ತು ಖಾಸಗಿ ಶ್ರೀಮಂತ ವ್ಯಕ್ತಿಗಳು ಹಾಗೂ ಸಂಸ್ಥೆಗಳು ಉದಾರ ನೆರವು ನೀಡಿದಾಗ ಪ್ರಾಕ್ತನಶಾಸ್ತ್ರದ ಬೆಳವಣಿಗೆಗೆ ನೆರವು ದೊರಕಿತು. ಕ್ರಮೇಣ ಅನೇಕ ಆಡಳಿತ ವರ್ಗದವರು ಅದರ ಐತಿಹಾಸಿಕ ಮಹತ್ತ್ವ ಮತ್ತು ವೈಜ್ಞಾನಿಕ ಸಾಫಲ್ಯವನ್ನು ಅರಿತುಕೊಂಡು ಸರ್ಕಾರಿ ಅಂಗವಾಗಿ ಪ್ರಾಕ್ತನ ಸರ್ವೇಕ್ಷಣ ಇಲಾಖೆಗಳನ್ನು ತೆರೆಯಲಾರಂಭಿಸಿದರು. ಈ ದಿಶೆಯಲ್ಲಿ ಭಾರತದಲ್ಲಿದ್ದ ಬ್ರಿಟಿಷ್ ಸರ್ಕಾರದ ಕಾರ್ಯಸ್ತುತ್ಯರ್ಹ. ಖಾಸಗಿ ಪ್ರಯತ್ನದಿಂದ ಅಲ್ಲಲ್ಲಿ ಅಲ್ಪಸ್ವಲ್ಪ ನಡೆಯುತ್ತಿದ್ದರೂ 1861ರ ವೇಳೆಗಾಗಲೇ ಸರ್ಕಾರಿ ಪುರಾತತ್ವ ಸರ್ವೇಕ್ಷಣ ಇಲಾಖೆ ಹುಟ್ಟಿಕೊಂಡಿತು. ಸ್ವಾತಂತ್ರ್ಯಾನಂತರ ಈ ದಿಶೆಯಲ್ಲಿ ಹೆಚ್ಚಿನ ಪ್ರೋತ್ಸಾಹ, ಚಟುವಟಿಕೆಗಳು ಕಂಡು ಬಂದಿವೆ. ಕೇಂದ್ರ ಪುರಾತತ್ವ ಇಲಾಖೆಯಲ್ಲದೆ, ರಾಜ್ಯ ಪುರಾತತ್ವ ಇಲಾಖೆಗಳು, ಹಲವಾರು ವಿಶ್ವವಿದ್ಯಾಲಯಗಳು ಪುರಾತತ್ವ ಇಲಾಖೆಗಳು ಮತ್ತು ಖಾಸಗಿ ಸಂಸ್ಥೆಗಳು ಈ ದಿಶೆಯಲ್ಲಿ ಕಾರ್ಯೋನ್ಮುಖವಾಗಿವೆ.

	ಪ್ರಾಕ್ತನಶಾಸ್ತ್ರದ ಮೂಲಧಾರಗಳು : ನೈಸರ್ಗಿಕ ಕಾರಣಗಳಿಂದ ಹಾಳಾಗದೆ ಉಳಿದುಬಂದ ಅವಶೇಷಗಳು (ಮತ್ತು ಅವುಗಳಿಂದ ತರ್ಕಿಸಬಹುದಾದ) ಮಾಹಿತಿಗಳು ಪ್ರಾಚೀನ ಮಾನವ ಸಂಸ್ಕøತಿಗಳನ್ನು ಅಧ್ಯಯನ ಮಾಡುವ ಪ್ರಾಕ್ತನಶಾಸ್ತ್ರಕ್ಕೆ ಮುಖ್ಯ ಆಧಾರಗಳಾಗಿರುತ್ತವೆ. ಅಂಥ ಮಾಹಿತಿಗಳು ಸಾಮಾನ್ಯವಾಗಿ ನಾಶವಾಗುತ್ತಾವಾದರೂ ಕೆಲವೊಮ್ಮೆ ಅಲ್ಲಲ್ಲಿಯ ಭೂಗುಣ, ಹವಾಮಾನಗಳ ಪ್ರಭಾವದಿಂದ ಅವು ಸುರಕ್ಷಿತವಾಗಿ ಉಳಿದುಕೊಳ್ಳಬಹುದು. ಪ್ರಾಚೀನ ಮಾನವ ಯಾವುದೇ ಪ್ರದೇಶದ ಭೂಮಿಯ ಮೇಲ್ಮೈ ಲಕ್ಷಣಗಳನ್ನು ಮಾರ್ಪಡಿಸಿದ್ದರೆ, ಯಾವುದೇ ನಿವೇಶನದಲ್ಲಿ ಗಣನೀಯ ಕಾಲದವರೆಗೂ ವಾಸಿಸಿದ್ದರೆ ಅಂಥ ಸ್ಥಳಗಳಲ್ಲಿ ಹಲವು ರೀತಿಯ ಕುರುಹುಗಳು ಉಳಿದಿರುತ್ತವೆ. ಪ್ರಾಕ್ತನಶಾಸ್ತ್ರಜ್ಞರು ಸಾಮಾನ್ಯವಾಗಿ ಅಂಥ ನಿವೇಶÀನಗಳ ಮೇಲೆ ತಮ್ಮ ಶೋಧವನ್ನು ಕೇಂದ್ರೀಕರಿಸುತ್ತಾರೆ. ಅವರು ಹುಡುಕುತ್ತಿರುವ ಮಾಹಿತಿಗಳು ಆ ನೆಲೆಗಳಲ್ಲಿ ಸಮೃದ್ಧವಾಗಿ ದೊರೆಯುತ್ತವೆ.

	ಪ್ರಾಕ್ತನ ನಿವೇಶನಗಳು ಹಲವು ವಿಧಗಳಾಗಿರುತ್ತವೆ. ಗುಹೆ, ಗುಹಾಮುಖ ಮುಂತಾದ ಆವೃತನಿವೇಶನಗಳು ಹವಾಮಾನದ ವ್ಯತ್ಯಯಕ್ಕೊಳಗಾಗದೆ, ತಮ್ಮಲ್ಲಿ ಹುದುಗಿರುವ ಮರದ ವಸ್ತುಗಳು, ಬುಟ್ಟಿಗಳು, ಅಥವಾ ಚರ್ಮದ ವಸ್ತುಗಳನ್ನು ಸಂರಕ್ಷಿಸುತ್ತವೆ. ಪಡುವಣ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಅಂಥ ಹಲವು ಒಣ ಗುಹೆಗಳಲ್ಲಿ ಹೆಚ್ಚು ಸಂಖ್ಯೆಯ ಸಾವಯವ ಪದಾರ್ಥಗಳು ಸುರಕ್ಷಿತ ಸ್ಥಿತಿಯಲ್ಲಿ ದೊರಕಿವೆ. ಈಜಿಪ್ಟಿನ ಪಿರಮಿಡ್ಡುಗಳಲ್ಲಿ ರಾಜವಂಶಗಳ ಆದಿಕಾಲದ ನೂರಾರು ಅವಶೇಷಗಳು ದೊರಕುತ್ತವೆ. ವಾಯವ್ಯ ಯೂರೋಪಿನ ನೆಲೆಗಳಲ್ಲಿ ಈ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಸಸ್ಯಾಂಗಾರ ಅಥವಾ ಪೀಟ್ ನಿಕ್ಷೇಪಗಳು ಕೂಡ ಸಾವಯವ ಅವಶೇಷಗಳನ್ನು ಸಂರಕ್ಷಿಸಬಲ್ಲವು. ಇಷ್ಟಾದರೂ ಪ್ರಾಗಿತಿಹಾಸಕಾಲದ ಸಾವಿರಾರು ನೆಲೆಗಳು ತೆರದ ಬಯಲು ಪ್ರದೇಶಗಳಲ್ಲಿ ಕಂಡುಬರುವುದರಿಂದ ಅಂಥ ನೆಲೆಗಳಲ್ಲಿ ಅವಶೇಷಗಳು ನಾಶವಾಗುವ ಸಾಧ್ಯತೆ ಹೆಚ್ಚು. ಜನವಸತಿಗಳಿದ್ದ ನಿವೇಶನಗಳ ಬಳಿ ಮಾನವ ಬಳಸಿ ಎಸೆದ ಕಸದ ಅನುಪಯುಕ್ತ ವಸ್ತುಗಳ ಸಂಗ್ರಹಗಳು ಏರ್ಪಟ್ಟಿರುತ್ತವೆ. ಸಮುದ್ರ ತೀರಗಳಲ್ಲಿ ಅಥವಾ ನದಿ ಸರೋವರಗಳ ದಂಡೆಗಳಲ್ಲಿ ಆಗಿನ ಜನ ಆಹಾರಕ್ಕಾಗಿ ಉಪಯೋಗಿಸಿದ ಪ್ರಾಣಿ ಮತ್ತು ಜಲಚರಗಳ ಮೂಳೆ ಮತ್ತು ಚಿಪ್ಪುಗಳ ರಾಶಿಗಳೇ ಕಂಡುಬರುತ್ತವೆ. ಒಲೆಗಳು, ನೆಲಗಟ್ಟುಗಳು, ಹಗೇವುಗಳು, ಗುಡಿಸಲುಗಳ ನಿರ್ಮಾಣದಲ್ಲಿ ಬಳಸಿದ ಮರದ ಕಂಬಗಳ ಗುಂಡಿಗಳು, ಉಪಯೋಗದಿಂದ ಸವೆದ, ಮುರಿದ, ಅಥವಾ ವಿಕೃತಗೊಂಡ ಆಯುಧೋಪಕರಣಗಳು ಮತ್ತು ಈ ಎಲ್ಲಾ ಚಟುವಟಿಕೆಗಳ ಮೂಲವಾದ ಮಾನವ ದೇಹದ ಭಾಗಗಳು ಪ್ರಾಚೀನ ನಿವೇಶನಗಳ ದಿಬ್ಬಗಳಲ್ಲಿ ದೊರಕುತ್ತವೆ. ನಿವೇಶನಗಳ ಬಳಿ ಇರುವ ಶ್ಮಶಾನಗಳ ಸಮಾಧಿಗಳಲ್ಲಿ ಮೃತರ ದೇಹಾವಶೇಷಗಳೊಂದಿಗೆ ಇಟ್ಟ ಅನೇಕ ಶವಸಂಸ್ಕಾರ ವಸ್ತುಗಳು ಸಿಗುತ್ತವೆ. ಬೃಹತ್ ಶಿಲಾ ಸಮಾಧಿ ನೆಲೆಗಳಲ್ಲಿ ಗೋರಿಗಳು ವಿಶಿಷ್ಟವಾಗಿ ಕಾಣಬರುತ್ತವೆ. ಇವಲ್ಲದೆ ಗುಹೆಗಳ ಗೋಡೆಗಳ ಮೇಲಿರಬಹುದಾದ ರೇಖಾಚಿತ್ರ, ವರ್ಣಚಿತ್ರ, ಕೊರತೆಗಳೂ, ಕೋಟೆ ಕೊತ್ತಲಗಳ ಕಂದಕಗಳ ರಸ್ತೆಗಳ ಅವಶೇಷಗಳು ಪ್ರಮುಖವಾಗಿ ಎದ್ದುಕಾಣಬಹುದು. ಪ್ರಾಚೀನ ಮಾನವ ತನಗೆ ಅವಶ್ಯವಾದ ಕಚ್ಚಾಸಾಮಗ್ರಿಗಳಾದ ಫ್ಲಿಂಟ್, ಅಬ್ಸಿಡಿಯನ್, ತಾಮ್ರ, ತವರ, ಕಬ್ಬಿಣ ಮುಂತಾದ ಖನಿಜಗಳನ್ನು ಅಗೆದು ತೆಗೆದ ಗಣಿಗಳ ಅವಶೇಷಗಳನ್ನು ಸುಲಭವಾಗಿ ಗುರುತಿಸಬಹುದು. ಆಕಾಶ ಛಾಯಾಚಿತ್ರಗ್ರಹಣದಿಂದ ಪ್ರಾಚೀನ ರಸ್ತೆ, ಹೊಲಗಳ ವಿಭಜನೆ ಮೊದಲಾದವನ್ನು ಸಹ ಗುರುತಿಸಬಹುದಾಗಿದೆ.

	ಮಾನವನಿರ್ಮಿತ ಭೌತಿಕಾವಶೇಷಗಳಲ್ಲದೆ ಪ್ರಾಚೀನ ನಿವೇಶನಗಳಿಂದ ದೊರೆಯುವ ಪದಾರ್ಥಗಳಿಂದ ಬೇಟೆ, ಮೀನುಗಾರಿಕೆ, ವ್ಯವಸಾಯ ಕೈಗಾರಿಕೆ ಮೊದಲಾದ ಆರ್ಥಿಕ ಕಸುಬುಗಳಿಗೂ ಮತೀಯ ಸಾಮಾಜಿಕ ವ್ಯಾಪಾರ ವ್ಯಾವಹಾರಿಕ ವಿಷಯಗಳಿಗೂ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಬಹುದು. ಸಾಧ್ಯವಾದಷ್ಟು ಮಟ್ಟಿಗೆ ಎಲ್ಲ ವಿಧವಾದ ಮಾಹಿತಿಗಳನ್ನು ಸಂಗ್ರಹಿಸಿ, ನಿರ್ದಿಷ್ಟಕಾಲದ ಸಂಸ್ಕøತಿಯ ಸಮಗ್ರ ಚಿತ್ರವನ್ನು ಪಡೆಯುವುದು ಪ್ರಾಕ್ತನಶಾಸ್ತ್ರಜ್ಞರ ಗುರಿ. ಈ ಗುರಿಯ ನಿರ್ವಹಣೆಗೆ ಪ್ರಾಚೀನ ನಿವೇಶನಗಳನ್ನು ವ್ಯವಸ್ಥಿತ ರೀತಿಯಲ್ಲಿ ಉತ್ಖನನ ಮಾಡುವ ಮೂಲಕ ಸಾಧ್ಯವಾದಷ್ಟು ಹೆಚ್ಚಿನ ಮಾಹಿತಿಗಳನ್ನು ಒಟ್ಟುಗೂಡಿಸಬೇಕಾಗುತ್ತದೆ. ಆದ್ದರಿಂದ ಆ ಕಾರ್ಯದಲ್ಲಿ ಸಹಾಯಕವಾದ ಭೂಪಟ ತಯಾರಿಕೆ, ಅವಶೇಷಗಳ ಸಂರಕ್ಷಣೆ, ನಕಾಶೆಗಳನ್ನು ಬಿಡಿಸುವುದು, ಛಾಯಾಚಿತ್ರಗಳನ್ನು ತೆಗೆಯುವುದು ಮುಂತಾದ ಹಲವು ವಿಧವಾದ ಉದ್ಯಮಗಳ ಸಾಧಾರಣ ಪರಿಚಯವನ್ನಾದರೂ ಪಡೆದಿರಬೇಕಾಗುತ್ತದೆ; ಉತ್ಖನನದ ಆಧುನಿಕ ವಿಧಾನಗಳಲ್ಲಿ ಪರಿಶ್ರಮ ಪಡೆದಿರಬೇಕು.

	ಪ್ರಾಚ್ಯನಿವೇಶನಗಳ ಅವಶೇಷಗಳ ಸಂಶೋಧನೆ ವಿವಿಧರೀತಿಯಲ್ಲಿ ಆಗಬಹುದು: ಸಮುದ್ರದಂಡೆ ಮತ್ತು ನದೀತೀರದಲ್ಲಿ ಪ್ರವಾಹದ ಕೊಚ್ಚುವಿಕೆಯಿಂದ, ಬಿರುಗಾಳಿ ಮಳೆಗಳಿಂದ, ಬಾವಿಗಳಿಂದ, ಮಾನವ ಕಾಲುವೆ ರಸ್ತೆ ಕಟ್ಟಡಗಳ ಆಸ್ತಿಭಾರಗಳನ್ನು ಅಗೆಯುವುದರಿಂದ, ಬಾವಿಗಳನ್ನು ತೋಡುವುದರಿಂದ, ಭೂಮಿಯನ್ನು ಉಳುವುದರಿಂದ ಭೂಪದರಗಳಲ್ಲಿ ಹುದುಗಿದ ಅವಶೇಷಗಳು ಮೇಲೆ ಕಾಣಿಸಿಕೊಳ್ಳುತ್ತವೆ. ಇವಲ್ಲದೆ ಇತರ ಹಲವಾರು ನೈಸರ್ಗಿಕ ಕಾರಣಗಳಿಂದ ಪ್ರಾಣಿಗಳ ಮತ್ತು ಮಾನವನ ಚಟುವಟಿಕೆಗಳಿಂದ ಮೇಲೆ ಬರುವ ಪ್ರಾಚೀನ ವಸ್ತುಗಳನ್ನು ಪ್ರಾಕ್ತನಶಾಸ್ತ್ರಜ್ಞರು ಗುರುತಿಸಿ ಪ್ರಾಕ್ತನ ನೆಲೆಗಳನ್ನು ಕಂಡುಹಿಡಿಯುತ್ತಾರೆ. ಹೀಗೆ ಒಂದು ಪ್ರದೇಶದಲ್ಲಿ ಹಲವಾರು ನೆಲೆಗಳನ್ನು ಗುರುತಿಸಿದ ಅನಂತರ ಅವುಗಳಲ್ಲಿ ಹೆಚ್ಚು ಫಲಪ್ರದವಾಗಬಹುದಾದ ನೆಲೆಯನ್ನು ಆಯ್ದುಕೊಂಡು ಉತ್ಖನನ ಮಾಡುತ್ತಾರೆ. ಉತ್ಖನನದಲ್ಲಿ ದೊರಕುವ ವಸ್ತುಗಳನ್ನು, ಮಾಹಿತಿಗಳನ್ನು ಅವುಗಳ ನಿರ್ದಿಷ್ಟಸ್ಥಾನ ಮತ್ತು ಅವುಗಳೊಂದಿಗೆ ದೊರಕುವ ಇತರ ವಸ್ತುಗಳ ಬಗ್ಗೆ ರೇಖಾಚಿತ್ರ, ಛಾಯಾಚಿತ್ರ ಮತ್ತು ಟಿಪ್ಪಣಿಗಳನ್ನು ತಯಾರಿಸಿದ ಅನಂತರ, ಸಾಗಿಸಬಹುದಾದ ವಸ್ತುಗಳಾದರೆ ವಸ್ತು ಸಂಗ್ರಹಾಲಯಕ್ಕೋ ಪ್ರಯೋಗಶಾಲೆಗೋ ಸಾಗಿಸಿ ತರುವಾಯ ಅವುಗಳಿಂದ ದೊರಕಬಹುದಾದ ಚಾರಿತ್ರಿಕ ಸಾಂಸ್ಕøತಿಕ ವಿಷಯಗಳನ್ನು ವರದಿಗಳಲ್ಲಿ ವಿವರಿಸುತ್ತಾರೆ. ಸ್ಥಳಾಂತರಿಸಲಾರದಾದ ಕಟ್ಟಡಾವಶೇಷ ಮುಂತಾದ ಮಾಹಿತಿಗಳಾದರೆ, ಅವನ್ನು ಅಲ್ಲಿಯೇ ಅರ್ಥೈಸಲು ಪ್ರಯತ್ನಿಸುತ್ತಾರೆ. ಮೂಳೆ ಮುಂತಾದ ಸಾವಯವ ಪದಾರ್ಥಗಳ ರಾಸಾಯನಿಕ ವಿಶ್ಲೇಷಣೆಯಿಂದ, ಮಣ್ಣಿನ ವಿಶ್ಲೇಷಣೆಯಿಂದ ಆಗಿನ ವಾಯುಗುಣ, ಮಳೆಯ ಪ್ರಮಾಣ ಆ ಪ್ರದೇಶದ ಸಸ್ಯ ಮತ್ತು ಪ್ರಾಣಿ ಸಂಪತ್ತು ಇವುಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಪ್ರಾಕ್ತನಶಾಸ್ತ್ರಜ್ಞ ಯಾವ ಉದ್ದೇಶಕ್ಕಾಗಿ ಉತ್ಖನನ ಕೈಗೊಳ್ಳುತ್ತಾನೋ ಅದಕ್ಕನುಸಾರವಾಗಿ ತನ್ನ ಸಂಶೋಧನೆಗೆ ನಿವೇಶನಗಳನ್ನು ಆರಿಸಿಕೊಳ್ಳುತ್ತಾನೆ.

	ಒಂದು ನೆಲೆಯಲ್ಲಿ ಕಂಡುಬರುವ, ಅನುಕ್ರಮವಾಗಿ ಅಸ್ತಿತ್ವದಲ್ಲಿದ್ದ ಕೆಲವು ಸಂಸ್ಕøತಿಗಳ ಅವಶೇಷಗಳನ್ನು ಅವುಗಳಿಗೆ ಸಂಬಂಧಿಸಿದ ಸಾಂಸ್ಕøತಿಕ ವಿವರಗಳನ್ನು ಸಂಸ್ಕøತಿ ಪ್ರರೂಪಗಳಾಗಿ ಪ್ರಾಕ್ತನಶಾಸ್ತ್ರಜ್ಞ ವಿಂಗಡಿಸಿಕೊಳ್ಳುತ್ತಾನೆ. ಅಂಥ ಸಂಸ್ಕøತಿ ಸಂಕೇತಗಳೊಂದಿಗೆ ತುಲನೆ ಮಾಡಲು ಸಾಧ್ಯವಾಗುತ್ತದೆ. ಒಂದು ಸಂಸ್ಕøತಿ ಒಂದು ಪ್ರದೇಶದಲ್ಲಿ ನಿರ್ದಿಷ್ಟ ಜನಾಂಗ ಅಥವಾ ಬುಡಕಟ್ಟಿನವರ ಕೃತಿಯಾಗಿದ್ದು, ಬೇರೆ ನೆಲೆಯಲ್ಲಿ ಇನ್ನೊಂದು ಗುಂಪಿನವರದಾಗಿರಬಹುದು. ಹಾಗಿದ್ದಾಗ ಸಹಜವಾಗಿಯೇ ಕೆಲವು ವ್ಯತ್ಯಾಸಗಳು ಕಂಡುಬರುತ್ತವಾದರೂ ಸಂಸ್ಕøತಿಯ ಮೂಲಭೂತ ಲಕ್ಷಣಗಳನ್ನು ಗುರುತಿಸಬೇಕಾಗುತ್ತದೆ.

	ಮಾನವ ಸಂಪ್ರದಾಯಬದ್ಧ ಪ್ರಾಣಿ. ಅವನು ಪೂರ್ವಜರ ಅನುಭವಗಳನ್ನು ಅನುಸರಿಸಿ ತನ್ನ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುತ್ತಾನೆ. ಆದರೆ ಪರಿಸರದ ಒತ್ತಡದಿಂದ ತಾಂತ್ರಿಕ ಮಾರ್ಪಾಡುಗಳಿಂದ ಅಥವಾ ಇತರ ಸಂಸ್ಕøತಿಗಳ ಸಂಪರ್ಕದಿಂದ ಹೊಸ ಅಂಶಗಳನ್ನು ಅಳವಡಿಸಿಕೊಳ್ಳಬಹುದು. ಆದರೂ ಅಂಥ ಮಾರ್ಪಾಡುಗಳು ಬಹಳ ನಿಧಾನವಾಗಿ ಉಂಟಾಗುತ್ತವೆ. ಪುರಾತನ ಶಿಲಾಯುಗದಲ್ಲಿ ಸಾವಿರಾರು ವರ್ಷಗಳವರೆಗೂ ಸಾಂಸ್ಕøತಿಕ ವಿವರಗಳಲ್ಲಿ ಬದಲಾವಣೆಗಳಿಲ್ಲದಿರುವುದು ಕಾಣುತ್ತದೆ. ಪ್ರಾಚೀನ ಕಾಲದಲ್ಲಿ ನಿಧಾನವಾಗಿ ಸಂಭವಿಸುತ್ತಿದ್ದ ಮಾರ್ಪಾಡುಗಳು ಕ್ರಮೇಣ ಅಂದರೆ ಉತ್ತರಕಾಲೀನ ಸಂಸ್ಕøತಿಗಳಲ್ಲಿ ತ್ವರಿತಗತಿಯಲ್ಲುಂಟಾಗುವುದನ್ನು ಕಾಣಬಹುದು. ಇಂಥ ಬದಲಾವಣೆಗಳನ್ನು ದೇಶಕಾಲಗಳ ಅಂತರದಲ್ಲಿ ಗುರುತಿಸಬಹುದು. 

	ಒಂದು ಸಂಸ್ಕøತಿಯ ನೆಲೆಗಳ ಭೌಗೋಳಿಕ ಪ್ರಸರಣೆಯಲ್ಲಿ ನಕಾಶೆಯ ಮೇಲೆ ಗುರುತಿಸಿದಾಗ ಮತ್ತು ಅವುಗಳ ಕಾಲಕ್ರಮವನ್ನು ತಿಳಿದಾಗ ಆ ಸಂಸ್ಕøತಿ ಎಲ್ಲಿ ಮೊದಲಿಗೆ ಪ್ರಾರಂಭವಾಯಿತು, ಎಲ್ಲೆಲ್ಲಿ ಪ್ರಸಾರವಾಯಿತು, ಪ್ರಸರಣೆಯ ಮಾರ್ಗಗಳು ಯಾವುವು ಮತ್ತು ಅವುಗಳ ಪರಸ್ಪರ ಸಂಬಂಧವೇನು ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ. ಅವುಗಳ ಸಹಾಯದಿಂದ ವಿಸ್ತøತ ಪ್ರದೇಶಗಳ ಸಾಂಸ್ಕøತಿಕ ಪ್ರಗತಿಯನ್ನು ತಿಳಿಯಬಹುದು.

	ಇಷ್ಟೆಲ್ಲ ಪರಿಶ್ರಮದ ತರುವಾಯ ಪ್ರಾಕ್ತನಶಾಸ್ತ್ರಜ್ಞ ಒಂದು ಸಂಸ್ಕøತಿಯ ವಿವಿಧ ಅಂಶಗಳು ಹೇಗೆ ಬಳಕೆಗೆ ಬಂದವು. ಅವುಗಳ ಮೂಲವೇನು, ಅವುಗಳ ಒಗ್ಗೂಡುವಿಕೆಗೆ ಸಾಧಕವಾದ ಭೌಗೋಳಿಕ ಮತ್ತು ಸಾಂದರ್ಭಿಕ ಕಾರಣಗಳೇನು, ಸಂಸ್ಕøತಿಯ ಬೆಳವಣಿಗೆ ಅಥವಾ ಅವನತಿಗೆ ಪರಿಸರ ಹೇಗೆ ಕಾರಣವಾಯಿತು ಎಂಬ ಇತಿಹಾಸದ ಪ್ರಧಾನ ಸಮಸ್ಯೆಗಳಿಗೆ ಉತ್ತರ ಹುಡುಕಲು ಸಾಧ್ಯವಾಗುತ್ತದೆ. ಕೆಲವು ಸಂಸ್ಕøತಿ ಲಕ್ಷಣಗಳು ವಿಸ್ತøತವಾಗಿ ಬಳಕೆಯಲ್ಲಿದ್ದರೆ ಅವು ಕಾಲಗಣನೆಯಲ್ಲಿ ಪ್ರಾಚೀನವಾದ ಪ್ರದೇಶದಲ್ಲಿ ಹುಟ್ಟಿ ಕ್ರಮೇಣ ಇತರ ನೆಲೆಗಳಿಗೆ ಹರಡಿವೆಯೆಂದು ತಿಳಿಯಬೇಕು. ಆದರೆ ಅಂಥ ಲಕ್ಷಣಗಳು ವಿಸ್ತಾರ ಪ್ರದೇಶಗಳಲ್ಲಿ ನಿರಂತರವಾಗಿ ಪ್ರಸಾರದಲ್ಲಿವೆ. ಭೌಗೋಳಿಕ ಅಂತರವಿದ್ದರೆ, ಅಂಥ ಸಂದರ್ಭಗಳಲ್ಲಿ ಅವು ಬೇರೆ ಬೇರೆ ಪ್ರದೇಶಗಳಲ್ಲಿ ಸ್ವತಂತ್ರವಾಗಿ ತಲೆದೋರಿದವೆಂದು ಭಾವಿಸಬೇಕಾಗುತ್ತದೆ. ಇಂಥ ಪ್ರಸರಣವಾದ ಮತ್ತು ಸ್ವತಂತ್ರ ಉಗಮವಾದಗಳಿಗೆ ನಿರ್ಣಾಯಕ ಸಾಕ್ಷ್ಯಗಳನ್ನು ಒದಗಿಸುವುದು ಕಷ್ಟಸಾಧ್ಯ.											(ಬಿ.ಕೆ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ